ADVERTISEMENT

ಬರ ಪರಿಹಾರ ಕಾಮಗಾರಿ ಆರಂಭಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 6:10 IST
Last Updated 28 ಜನವರಿ 2012, 6:10 IST

ಮಧುಗಿರಿ: ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವ ತಾಲ್ಲೂಕಿನ ರೈತರು ಮತ್ತು ಕೃಷಿ ಕಾರ್ಮಿಕರು ತೀರ್ವ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಉಪ ವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದರು.

ಬರದಿಂದ ಕಂಗಾಲಾಗಿರುವ ರೈತರು ಗುಳೆ ಹೋಗುತ್ತಿದ್ದಾರೆ. ತಾಲ್ಲೂಕಿನ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ಮುನ್ನ ಸರ್ಕಾರ ತಾಲ್ಲೂಕಿನಲ್ಲಿ ಶೀಘ್ರ ಪರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿರುವುರಿಂದ ಎಲ್ಲ ಗ್ರಾಮಗಳಿಗೆ ಡಿಫ್ಲೋರೈಡ್ ಪ್ಲಾಂಟ್ ಅಳವಡಿಸಬೇಕು. ದನ- ಕರುಗಳಿಗೆ ಮೇವು ಹಾಗೂ ನೀರು ಒದಗಿಸಲು ಗೋಶಾಲೆ ಪ್ರಾರಂಭಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 12 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಒದಗಿಸಬೇಕು. ಟ್ರಾಕ್ಟರ್ ಸಾಲದ ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಮೈದನಹಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತಲ 5 ಸಾವಿರ ಎಕರೆ ಪ್ರದೇಶದಲ್ಲಿ ಕೃಷ್ಣಮೃಗಗಳಿಂದ ಅರಣ್ಯ ಬೆಳೆನಷ್ಟವಾಗುತ್ತಿದೆ. ಈ ಪ್ರದೇಶದ ರೈತರಿಗೆ ಎಕರೆವಾರು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಆರ್.ರಾಜಶೇಖರ್, ಉಪಾಧ್ಯಕ್ಷ ಸಿ.ಕೆ.ಗಂಗಣ್ಣ, ಕಾರ್ಯದರ್ಶಿ ದೊಡ್ಡಮಾಳಯ್ಯ, ಸಂಘಟನಾ ಕಾರ್ಯದರ್ಶಿ ಜಿ.ಸಿ.ಶಂಕರ್, ಸಂಚಾಲಕ ಶಿವಣ್ಣ, ಚಿಕ್ಕಣ್ಣ, ನಾಗರತ್ನಮ್ಮ ಮತ್ತಿರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.