ADVERTISEMENT

ಬಸ್ ಪ್ರಯಾಣ ದರ ಏರಿಕೆ: ಬಾಯಿ, ಕಣ್ ಬಂದ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST
ಬಸ್ ಪ್ರಯಾಣ ದರ ಏರಿಕೆ: ಬಾಯಿ, ಕಣ್ ಬಂದ್
ಬಸ್ ಪ್ರಯಾಣ ದರ ಏರಿಕೆ: ಬಾಯಿ, ಕಣ್ ಬಂದ್   

ತುಮಕೂರು: ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಸಿಪಿಎಂ, ಸಿಐಟಿಯು ಕಾರ್ಯಕರ್ತರು ಮಂಗಳವಾರ ಗಾಂಧಿ ಜಯಂತಿಯಂದು ಬಾಯಿ, ಕಿವಿ, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಗರದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಡಿಸೇಲ್ ಬೆಲೆ ಹೆಚ್ಚಳ ಮಾಡಿದರೆ, ರಾಜ್ಯದ ಬಿಜೆಪಿ ಸರ್ಕಾರ ಬಸ್ ಪ್ರಯಾಣ ದರ ಏರಿಕೆ ಮಾಡಿ ಮಹಾತ್ಮ ಗಾಂಧೀಜಿ ಕನಸಿಗೆ ತಿಲಾಂಜಲಿ ಇಟ್ಟಿವೆ. ಸಮಾಜದ ಕಟ್ಟಕಡೆಯ ಮನುಷ್ಯನ ಬೆನ್ನಿಗೆ ಚೂರಿ ಹಾಕಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧೀಜಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಮಂಗಗಳನ್ನು ಸಾಂಕೇತಿಸಿ ಕೆಟ್ಟದ್ದನ್ನು ನೋಡದಂತೆ, ಕೆಟ್ಟದ್ದನ್ನು ಕೇಳದಂತೆ, ಕೆಟ್ಟದ್ದನ್ನು ಹೇಳದಂತೆ ನುಡಿದಿದ್ದರು. ಜನತೆ ಹಾಗೂ ಜನಪ್ರತಿನಿಧಿಗಳು ಜನಪರ ಆಲೋಚನೆಗಳನ್ನು ಬೆಳೆಸಿಕೊಂಡು ಉತ್ತಮ ಮಾರ್ಗದಲ್ಲಿ ಆಡಳಿತ ನಡೆಸುವಂತೆ ಕಿವಿ ಮಾತು ಹೇಳಿದ್ದರು. ಆದರೆ ರಾಜ್ಯದ ಬಿಜೆಪಿ ಸರ್ಕಾರ, ಕೇಂದ್ರದ ಕಾಂಗ್ರೆಸ್ ಸರ್ಕಾರ ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಕಿಡಿಕಾರಿದರು.

ಸಿಪಿಎಂ ಮುಖಂಡರಾದ ಬಿ.ಉಮೇಶ್, ಎನ್.ಕೆ.ಸುಬ್ರಹ್ಮಣ್ಯ, ಮಂಜುನಾಥ್, ಸಿಐಟಿಯು ಮುಖಂಡರಾದ ಷಣ್ಮುಖಪ್ಪ ಮಾತನಾಡಿದರು. ಕಟ್ಟಡ ಕಾರ್ಮಿಕರ ಸಂಘದ ಶ್ರೀಧರ್, ಟಿ.ಎಚ್.ರಾಮು, ರಾಮಚಂದ್ರ, ಬೀಡಿ ಕಾರ್ಮಿಕ ಸಂಘದ ಸರ್ದಾರ್, ನಾಗರಾಜು, ಸಂಘಟಿತ ವಲಯದ ಲೋಕೇಶ್, ಚಂದ್ರಮೌಳಿ, ಮಹೇಶ್, ಎಸ್‌ಎಫ್‌ಐ ಕಾರ್ಯದರ್ಶಿ ಶಿವಣ್ಣ, ಜಿ.ದರ್ಶನ್ ಇತರರಿದ್ದರು.

ಜನರ ನೋವಿಗೆ ಕಿವಿಗೊಡದ ಸರ್ಕಾರಗಳು ಗಾಂಧಿಜಯಂತಿ ಆಚರಿಸುವ ಅರ್ಹತೆ ಇಲ್ಲ. ತಕ್ಷಣವೇ ಹೆಚ್ಚಳ ಮಾಡಿರುವ ಬಸ್ ಪ್ರಯಾಣ ದರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.