ADVERTISEMENT

`ಬಾಲ್ಯ ವಿವಾಹ ಸಾಮಾಜಿಕ ತೊಡಕು'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:34 IST
Last Updated 4 ಡಿಸೆಂಬರ್ 2012, 6:34 IST

ತಿಪಟೂರು: ಬಾಲ್ಯ ವಿವಾಹದಿಂದ ಗಂಡು-ಹೆಣ್ಣಿನ ಸರ್ವಾಂಗೀಣ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಎಂ.ಸಿ.ರಂಗನಾಥ್ ತಿಳಿಸಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎನ್‌ಎಸ್‌ಎಸ್ ಘಟಕದ ಸಹಕಾರದಲ್ಲಿ ಸೋಮವಾರ ನಡೆದ ಬಾಲ್ಯ ವಿವಾಹದ ದುಷ್ಪರಿಣಾಮ ಕುರಿತ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಬಾಲ್ಯ ಜೀವನ, ಅನುಭವವನ್ನು ಬಾಲ್ಯ ವಿವಾಹ ಕಳೆಯುತ್ತದೆ. ಸ್ವಸ್ಥ ಜೀವನ ಕಟ್ಟಿಕೊಳ್ಳಲು ತೊಡಕಾಗುತ್ತದೆ. ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದರೂ; ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಜೀವಂತವಾಗಿರುವುದು ದುರಂತ. ಯುವಜನತೆ ಬಾಲ್ಯ ವಿವಾಹದ ವಿರುದ್ಧ ಜಾಗೃತರಾಗಬೇಕು ಎಂದರು.

ಪ್ರಾಚಾರ್ಯ ಕೆ.ರಂಗನಾಥ್ ಮಾತನಾಡಿ, ಬಾಲ್ಯ ವಿವಾಹದಂಥ ಸಾಮಾಜಿಕ ಪಿಡುಗು ನಿರ್ಮೂಲನೆ ಮಾಡಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು. ಭಾಷಣ ಸ್ಪರ್ಧೆಯಲ್ಲಿ ಮೇಘಾ, ಸುರೇಖಾ, ಪ್ರೇಮಾ ಅನುಕ್ರಮ ಪಡೆದರು. ಇವರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ದೊಡ್ಡೇಗೌಡ, ಎಂ.ಜಿ.ಸಿದ್ದರಾಮಯ್ಯ, ಬಿ.ಕೆ.ವಿಶಾಲಾಕ್ಷಿ  ತೀರ್ಪುಗಾರರಾಗಿದ್ದರು. ಉಪನ್ಯಾಸಕ ಜಿ.ಎಸ್.ರಘು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಕೆಂಚಪ್ಪ, ಗೋಪಾಲಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.