ADVERTISEMENT

ಬಾಹುಬಲಿಗೆ ಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 7:15 IST
Last Updated 30 ಮಾರ್ಚ್ 2018, 7:15 IST
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ಜೈನ ನೆಲೆ ಬೆಳಗುಲಿಯಲ್ಲಿ ಗುರುವಾರ ಮಹಾವೀರ ಜಯಂತಿಯನ್ನು ಆಚರಿಸಲಾಯಿತು
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ಜೈನ ನೆಲೆ ಬೆಳಗುಲಿಯಲ್ಲಿ ಗುರುವಾರ ಮಹಾವೀರ ಜಯಂತಿಯನ್ನು ಆಚರಿಸಲಾಯಿತು   

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಹಂದನಕೆರೆ ಹೋಬಳಿ ಜೈನ ನೆಲೆ ಬೆಳಗುಲಿಯಲ್ಲಿ ಗುರುವಾರ ಮಹಾವೀರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ 8 ಗಂಟೆಗೆ ಮಹಿಳೆರಿಂದ ಕಳಶ ನೀರು ತಂದು ಮಹಾವೀರಸ್ವಾಮಿಗೆ ಗಂಗಾಸ್ನಾನ ಹಾಗೂ ಅಭಿಷೇಕ ಮಾಡುವ ಮೂಲಕ ಪ್ರಾರಂಭವಾದ ವಿಧಿ ವಿಧಾನಗಳು ರಾತ್ರಿ 12ರ ವರೆಗೂ ಜರುಗಿದವು.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರ ವರೆಗೆ ವೈರಾಗ್ಯಮೂರ್ತಿ ಬಾಹುಬಲಿಗೆ ಮಸ್ತಕಾಭಿಷೇಕ ನಡೆಯಿತು. ನಂತರ ತೊಟ್ಟಿಲು ಪೂಜೆ. ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ 6.30ಕ್ಕೆ ಪ್ರಾರಂಭವಾದ ಬಾಹುಬಲಿ ಮೂರ್ತಿ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ಮೆರವಣಿಗೆಯಲ್ಲಿ ನಡೆದ ಸಾಮೂಹಿಕ ನೃತ್ಯ ಮನಮೋಹಕವಾಗಿತ್ತು. ಗಂಡಸರು, ಹೆಂಗಸರು, ಯುವಕ ಯುವತಿಯರು ಒಗ್ಗೂಡಿ ಹೆಜ್ಜೆಹಾಕಿದ್ದು ಆಕರ್ಷಕವಾಗಿತ್ತು. ಮಹಾವೀರ ಜೈನ ಮಂಡಳಿಯ ಕಾರ್ಯಕಾರಿ ಸಮಿತಿ ಹಾಗೂ ಮಹಾವೀರ ಯುವಕ ಮಂಡಳಿ ವತಿಯಿಂದ ಉತ್ಸವ ಆಯೋಜಿಸಲಾಗಿತ್ತು.

ADVERTISEMENT

ಸಾಂಕೇತಿಕ ಆಚರಣೆ: ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಕಚೇರಿಯಲ್ಲಿ ಬೆಳಿಗ್ಗೆ ಸಾಂಕೇತಿಕವಾಗಿ ಮಹಾವೀರ ಜಯಂತಿ ಆಚರಿಸಲಾಯಿತು. ತಹಶೀಲ್ದಾರ್ ತಿಮ್ಮಪ್ಪ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜೈನ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಬಳಿಕ ಜೈನ ಸಮುದಾಯದ ಮುಖಂಡರು ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ತೆರಳಿ ಹಣ್ಣು ಬ್ರೆಡ್ ವಿತರಿಸಿದರು.

ತಾಲ್ಲೂಕು ಮಹಾವೀರ ಜೈನ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಶಾಂತಿ ಹಾಗೂ ತ್ಯಾಗದ ಮಹತ್ವವನ್ನು ಲೋಕಕ್ಕೆ ಸಾರಿದ ಮಹಾವಿರರ ಜೀವನ ಮೌಲ್ಯಗಳನ್ನು ಇಂದಿನ ಯುವಕರಿಗೆ ಪರಿಚಯಿಸುವ ಕೆಲಸ ಆಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.