ADVERTISEMENT

ಬಿ.ಎಚ್.ರಸ್ತೆ ಮತ್ತೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 11:25 IST
Last Updated 16 ಜೂನ್ 2011, 11:25 IST

ತುಮಕೂರು: ನಗರದ ಬಿ.ಎಚ್.ರಸ್ತೆ (ರಾಷ್ಟ್ರೀಯ ಹೆದ್ದಾರಿ- 206) ಬಟವಾಡಿ ಸರ್ಕಲ್‌ನಿಂದ ಶಿವಕುಮಾರ ಸ್ವಾಮೀಜಿ ವೃತ್ತದವರೆಗೆ 150 ಅಡಿ ವಿಸ್ತೀರ್ಣದಲ್ಲಿ ರಸ್ತೆ ನಿರ್ಮಿಸಲು ಒತ್ತುವರಿಯನ್ನು ಶೀಘ್ರ ತೆರವುಗೊಳಿಸಲು ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಂಸತ್ ಸದಸ್ಯ ಜಿ.ಎಸ್.ಬಸವರಾಜು ನೇತೃತ್ವದಲ್ಲಿ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಒತ್ತುವರಿ ತೆರವುಗೊಳಿಸದೆ, ಯಾವುದೇ ಮೂಲಸೌಲಭ್ಯ ನಿರ್ಮಿಸದೆ ಬೇಕಾಬಿಟ್ಟಿ ಹೆದ್ದಾರಿ ಅಭಿವೃದ್ಧಿಪಡಿಸುತ್ತಿರುವ ಕುರಿತು ಈಚೆಗೆ `ಪ್ರಜಾವಾಣಿ~ ವರದಿ ಬೆಳಕು ಚೆಲ್ಲಿತ್ತು.

ಈ ಹಿನ್ನೆಲೆಯಲ್ಲಿ ನಗರದ ವಿವಿಧ ಸಂಘಟನೆಗಳು, ಸಂಸದ ಜಿ.ಎಸ್.ಬಸವರಾಜು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಒತ್ತಾಯದ ಮೇರೆಗೆ ಈ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ವಿವಿಧ ನಾಗರಿಕ ಸಮಿತಿಗಳ ಪದಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿದ್ದರು. ಅಕ್ರಮ ಕಟ್ಟಡಗಳನ್ನು ಗುರುತಿಸಿ ಸರ್ಕಾರಿ ಭೂಮಿಯನ್ನು ಸಂಪೂರ್ಣ ತೆರವುಗೊಳಿಸುವುದು, ಚರಂಡಿಯಿಂದ ಪಕ್ಕದಲ್ಲಿ ಸರ್ವೀಸ್ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆ ತೀರ್ಮಾನಿಸಿತು. ಈ ಸಮಿತಿಯು ಬಸ್ ನಿಲ್ದಾಣ, ಸರ್ಕಲ್ ಹಾಗೂ ಸಿಗ್ನಲ್‌ಗಳ ಸ್ಥಾಪನೆಗೆ ಬೇಕಾದ ಸ್ಥಳವನ್ನು ಗುರುತಿಸಿ ವಾರದಲ್ಲಿ ವರದಿ ನೀಡಲು ಸೂಚಿಸಲಾಗಿದೆ.

ಸಭೆಯಲ್ಲಿದ್ದ ವಿವಿಧ ನಾಗರಿಕ ಸಮಿತಿಗಳ ಪದಾಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು. ಶಿವಕುಮಾರ ಸ್ವಾಮೀಜಿ ಸರ್ಕಲ್‌ನಿಂದ ಗುಬ್ಬಿಗೇಟ್‌ವರೆಗೆ 14 ಅಡಿ ಸರ್ವೀಸ್ ರಸ್ತೆ ಮತ್ತು 72 ಅಡಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಭೆ ಆಗ್ರಹಿಸಿತು.

ಬಟವಾಡಿಯಿಂದ ಗುಬ್ಬಿ ಗೇಟ್‌ವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಉಳಿದಿರುವ ಮಣ್ಣು ದಿಬ್ಬ- ಮರದ ಬೇರುಗಳನ್ನು ತೆಗೆದು ಸಮತಟ್ಟು ಮಾಡುವ ಹೊಣೆಗಾರಿಕೆ ಮತ್ತು ಹೆದ್ದಾರಿಯಲ್ಲಿ ಬೀದಿದೀಪ ನಿರ್ವಹಿಸುವ ಹಕ್ಕನ್ನು ಪಾಲಿಕೆಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹೆದ್ದಾರಿಯ ಸುತ್ತಲಿನ ಚರಂಡಿಯಲ್ಲಿ ನೀರು ಹರಿಯಲು ಇರುವ ಅಡ್ಡಿ, ನೀರು ಹೊರಳಬೇಕಾದ ಸ್ಥಳದ ಅಭಿವೃದ್ಧಿಯ ಬಗ್ಗೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ವಾಹನಗಳು ರಾಷ್ಟ್ರೀಯ ಹೆದ್ದಾರಿ 4ರಿಂದ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಪ್ರವೇಶಿಸುವ ಸ್ಥಳದಲ್ಲಿ ವೃತ್ತ ನಿರ್ಮಿಸಿ, ಸರ್ವೀಸ್ ರಸ್ತೆ ಅಭಿವೃದ್ಧಿಪಡಿಸಿ ಸಂಚಾರ ದಟ್ಟಣೆ ಕಡಿಮೆ ಮಾಡಬೇಕು. ಸೂಕ್ತ ಸ್ಥಳದಲ್ಲಿ ನಾಮಫಲಕ ಹಾಕಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಎಂ.ಜಿ.ರಸ್ತೆ ವಿಸ್ತರಣೆ
ಎಂ.ಜಿ.ರಸ್ತೆಯನ್ನು 45 ಅಡಿ ವಿಸ್ತರಿಸುವ ಬಗ್ಗೆ ಪ್ರಸ್ತಾಪವಾದಾಗ ಸಭೆಯಲ್ಲಿದ್ದ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಕಾನೂನಿನ ಪ್ರಕಾರ ಎಂ.ಜಿ.ರಸ್ತೆಯನ್ನು 60 ಅಡಿ ವಿಸ್ತರಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಪದಾಧಿಕಾರಿಗಳು ಎಚ್ಚರಿಸಿದರು.

ನ್ಯಾಯಾಲಯಕ್ಕೆ ಹೋಗುವ ಮೊದಲು ಎಂ.ಜಿ.ರಸ್ತೆಯ ಕಟ್ಟಡ ಮಾಲೀಕರೊಂದಿಗೆ ಸಭೆ ನಡೆಸಿ ಚರ್ಚಿಸಿ, ಮಾತುಕತೆಯ ಮೂಲಕ ಗೊಂದಲ ಪರಿಹರಿಸಿಕೊಳ್ಳೋಣ ಎಂಬ ಜಿಲ್ಲಾಧಿಕಾರಿ ಸಲಹೆಗೆ ಸಭೆ ಸಮ್ಮತಿಸಿತು.

ಒಂದು ತಿಂಗಳೊಳಗೆ ನಗರದ ಎಲ್ಲ ಪಾರ್ಕ್ ಒತ್ತುವರಿ ತೆರವು ಮಾಡಲು ಹಾಗೂ ಒತ್ತುವರಿದಾರರ ಹೆಸರನ್ನು ಪ್ರಕಟಿಸಲು ಸಭೆಯಲ್ಲಿ ಸೂಚಿಸಲಾಯಿತು. ನಗರದಲ್ಲಿ ಗುರುತಿಸಲಾಗಿರುವ 422 ಪಾರ್ಕ್‌ಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಸಭೆ ತೀರ್ಮಾನಿಸಿತು.

ಹಸಿರು ತುಮಕೂರು
ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ `ಹಸಿರು ತುಮಕೂರು~ ಕಾರ್ಯಕ್ರಮಕ್ಕೆ ವಿಶೇಷ ಸಮಿತಿ ರಚಿಸಲಾಯಿತು. ಇದೇ 30ರ ಒಳಗೆ ನಗರದಲ್ಲಿ ಗಿಡ ನೆಡಲು ಇರುವ ಸ್ಥಳಗಳ ಬಗ್ಗೆ ಈ ಸಮಿತಿ ಸಮಗ್ರ ಮಾಹಿತಿ ನೀಡಬೇಕು. ಗಿಡಗಳ ಸುತ್ತ ಹಾಕುವ `ಟ್ರೀಗಾರ್ಡ್~ಗಳನ್ನು ಕೊಡುಗೆ ನೀಡಲು ಮತ್ತು ಅದರ ಮೇಲೆ ತಮ್ಮ ಕಂಪೆನಿಯ ಹೆಸರು ಬರೆಸಿಕೊಳ್ಳಲು ಖಾಸಗಿ ಕಂಪೆನಿಗಳಿಗೆ ಅವಕಾಶ ನೀಡಲು ಸಭೆ ನಿರ್ಧರಿಸಿತು.

ಸಾರ್ವಜನಿಕರ ಸಹಭಾಗಿತ್ವದಲ್ಲಿ ಗ್ರೀನ್ ತುಮಕೂರು ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಸದ ಬಸವರಾಜ್ ಸೂಚಿಸಿದರು. ಗಿಡನೆಡಲು ಮುಂದೆ ಬರುವ ಕುಟುಂಬಗಳಿಗೆ ಮಕ್ಕಳ ಹೆಸರು ಬರೆಸಲು ಅವಕಾಶ ನೀಡುವ ಬಗ್ಗೆಯೂ ಚರ್ಚೆ ನಡೆಯಿತು.

ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆಗೆ `ಹಸಿರು ತುಮಕೂರು- ಸ್ವಚ್ಛ ತುಮಕೂರು, ಸೇಫ್-ತುಮಕೂರು~ ಆಂದೋಲನದ ಹೊಣೆ ವಹಿಸಲಾಯಿತು.

ಸಭೆಯಲ್ಲಿ ಅಭಿವೃದ್ಧಿ ರೆವಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್, ವಿಜ್ಞಾನ ಕೇಂದ್ರ, ವನ್ಯಜೀವಿ ನಿಸರ್ಗ ಸಂಸ್ಥೆ, ಸಪ್ತಗಿರಿ ರಕ್ಷಣಾ ಸಮಿತಿ ಸೇರಿದಂತೆ 25 ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಕಾಲೇಜುಗಳ ಪ್ರಾಚಾರ್ಯರು ಸಹ ಇದ್ದರು.

ಸಭೆಯ ನಂತರ ಬಿ.ಎಚ್.ರಸ್ತೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಿದರು. ಅಭಿವೃದ್ಧಿಗಾಗಿ ಸಲಹೆಗಳನ್ನು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.