ADVERTISEMENT

ಭಣಗುಡುತ್ತಿರುವ ಸರ್ಕಾರಿ ಕಚೇರಿಗಳು

ನೀತಿ ಸಂಹಿತೆ ಜಾರಿ ಪರಿಣಾಮ; ಕೆಲಸ ಕಾರ್ಯಕ್ಕೆ ಜನರ ಅಲೆದಾಟ, ಖಾಲಿ ಕುಳಿತ ಕಾಗದ ಪತ್ರ ಬರಹಗಾರರು

ರಾಮರಡ್ಡಿ ಅಳವಂಡಿ
Published 7 ಏಪ್ರಿಲ್ 2018, 11:24 IST
Last Updated 7 ಏಪ್ರಿಲ್ 2018, 11:24 IST

ತುಮಕೂರು: ಭಣಗುಡುತ್ತಿರುವ ಸರ್ಕಾರಿ ಕಚೇರಿಗಳು, ಬಿಕೊ ಎನ್ನುತ್ತಿದ್ದ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಕಚೇರಿ ಆವರಣ, ಅಧಿಕಾರಿಗಳು ಈಗ ಬರುತ್ತಾರೊ ಏನೊ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಜನರು.

ಇದು ನೀತಿ ಸಂಹಿತೆಯಿಂದ ಸಾರ್ವಜನಿಕರಿಗೆ ತಟ್ಟಿರುವ ಬಿಸಿ. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಕಚೇರಿ, ಉಪನೋಂದಣಿ ಅಧಿಕಾರಿ ಕಚೇರಿ, ವಿವಿಧ ಇಲಾಖೆಗಳ ಕಚೇರಿಗಳು ಬಹುತೇಕ ಖಾಲಿ ಹೊಡೆಯುತ್ತಿವೆ.

ವಿಧಾನಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೊಂಡ ಬಳಿಕ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಕಾರ್ಯಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ADVERTISEMENT

ಹೀಗಾಗಿ, ಕಚೇರಿಯಲ್ಲಿರಬೇಕಾದ ಅಧಿಕಾರಿ, ಸಿಬ್ಬಂದಿ ಈಗ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರಿಂದ ಸಾರ್ವಜನಿಕರು ಕಚೇರಿ ಕೆಲಸ ಕಾರ್ಯಗಳಿಗೆ ಅಡಚಣೆಯಾಗಿದೆ.

ಈಗ ಸರ್ಕಾರಿ ಕಚೇರಿಗಳ ಮುಂದೆ ಸಾರ್ವಜನಿಕರು ಕೆಲಸ ಕಾರ್ಯಕ್ಕೆ ಸಾಲುಗಟ್ಟಿ ನಿಂತಿರುವ ಸನ್ನಿವೇಶಗಳು ಕಾಣುತ್ತಿಲ್ಲ. ಮತ್ತೊಂದೆಡೆ ಬಿಸಿಲಿನ ತಾಪಕ್ಕೆ ಸಾರ್ವಜನಿಕರು ಕೆಲಸ ಕಾರ್ಯ ಮಾಡಿಸಿಕೊಳ್ಳಲು ಬರುತ್ತಿಲ್ಲ. ಬಂದರೂ 12 ಗಂಟೆಯೊಳಗೆ ಬಂದು ಹೋಗಿಬಿಡುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು ಬಹುತೇಕರಿಗೆ ಗೊತ್ತಿದೆ. ಹೀಗಾಗಿ, ಸಮಸ್ಯೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಉಪವಿಭಾಗದ ಕಚೇರಿ ಅಧಿಕಾರಿಯೊಬ್ಬರು ’ಪ್ರಜಾವಾಣ’ಿಗೆ ತಿಳಿಸಿದರು.

ಉಪವಿಭಾಗಾಧಿಕಾರಿ ಕಚೇರಿ ಪ್ರವೇಶ ದ್ವಾರದಲ್ಲಿಯೇ ನೀತಿ ಸಂಹಿತೆ ಪ್ರಯುಕ್ತ ಅಧಿಕಾರಿ ಮತ್ತು ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸಾರ್ವಜನಿಕರು ಸಹಕರಿಸಬೇಕು ಎಂಬ ಪ್ರತಿಯನ್ನು ಅಂಟಿಸಲಾಗಿದೆ. ಇದನ್ನು ನೋಡುತ್ತಿದ್ದಂತೆಯೇ ಜನರು ತಮ್ಮಷ್ಟಕ್ಕೆ ತಾವೇ ಹಿಂದಕ್ಕೆ ಹೋಗುತ್ತಿದ್ದಾರೆ.

‘ಅಧಿಕಾರಿಗಳಿದ್ದರೆ ಸಿಬ್ಬಂದಿ ಇರುವುದಿಲ್ಲ. ಸಿಬ್ಬಂದಿ ಇದ್ದರೆ ಅಧಿಕಾರಿಗಳು ಇಲ್ಲದಂತಹ ವಾತಾವರಣ ಇದೆ. ಹೀಗಾಗಿ ಒಂದು ದಿನಕ್ಕೆ ಆಗಬೇಕಾದ ಕೆಲಸ ನಾಲ್ಕಾರು ದಿನಗಳು ಹಿಡಿಯುತ್ತಿವೆ. ಸಿಬ್ಬಂದಿ ದಾಖಲಾತಿ ಸರಿಪಡಿಸಿದ್ದರೆ ಸಹಿ ಮಾಡಲು ಅಧಿಕಾರಿಗಳೇ ಇರುವುದಿಲ್ಲ. ಹೀಗಾಗಿ ಅಲೆದಾಡಬೇಕಾಗಿದೆ’ ಎಂದು ತಹಶೀಲ್ದಾರ ಕಚೇರಿಗೆ ಬಂದಿದ್ದ ನಂಜಯ್ಯ ಎಂಬುವರು ಬೇಸರ ವ್ಯಕ್ತಪಡಿಸಿದರು.

‘ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದು ಅಧಿಕಾರಿ, ಸಿಬ್ಬಂದಿ ಕೆಲಸ ಕಾರ್ಯ ಮಾಡಲೇಬೇಕು. ಮೇಲಧಿಕಾರಿಗಳು ನಿಯೋಜಿಸಿದ ಸ್ಥಳಕ್ಕೆ ತೆರಳಿ ಕೆಲಸ ಮಾಡಲೇಬೇಕು. ಅದರೆ, ನಮ್ಮಂತಹವರಿಗೆ ತೊಂದರೆಯಾಗಿಯೇ ಆಗುತ್ತದೆ. ಚುನಾವಣೆ ಮುಗಿದ ಬಳಿಕವೇ ಕೆಲಸ ಕಾರ್ಯಗಳು ಆಗುವುದು ಎಂಬಂತಾಗಿದೆ’ ಎಂದು ಸಮಸ್ಯೆ ವಿವರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹತ್ತಿರ, ಉಪನೋಂದಣಿ ಕಚೇರಿ ಹತ್ತಿರ ವಿವಿಧ ಕಾಗದ ಪತ್ರ ಬರೆಯುವವರು, ಬಾಂಡ್ ಬರಹಗಾರರು ಕೆಲಸವಿಲ್ಲದೇ ಕಾಲ ಕಳೆಯುವಂತಾಗಿದೆ.

ಸದಾ ಕಿಕ್ಕಿರಿದು ಸೇರಿರುತ್ತಿದ್ದ ಜನರು ಈಗ ಕಾಣುತ್ತಿಲ್ಲ. ಕಾಗದ ಪತ್ರ ಬರೆದು ಒಂದು ದಿನಕ್ಕೆ ಕನಿಷ್ಠ ₹ 500 ಬರುತ್ತಿತ್ತು. ಈಗ ₹ 200 ಆಗುತ್ತಿಲ್ಲ. ಮಧ್ಯಾಹ್ನಕ್ಕೆ ಟೈಪಿಂಗ್ ಯಂತ್ರ, ಟೇಬಲ್, ಪೇಪರ್ ಬಂಡಲ್ ಗಳನ್ನು ಸುತ್ತಿಟ್ಟು ಮನೆಗೆ ಹೋಗುತ್ತಿದ್ದೇವೆ. ಇನ್ನೂ ಕನಿಷ್ಠ ಒಂದುವರೆ ತಿಂಗಳು ಇದೇ ಸ್ಥಿತಿ ಇರಲಿದೆ. ನಮಗೆ ದೈನಂದಿನ ಜೀವನ ನಡೆಸುವುದು ಕಷ್ಟ ಎಂದು ಕಾಗದ ಪತ್ರ ಬರಹಗಾರರಾದ ಶಂಕರ್ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.