ADVERTISEMENT

ಮಗು ಕೂಡಿಹಾಕಿದ ಅಂಗನವಾಡಿ ಕಾರ್ಯಕರ್ತೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 11:40 IST
Last Updated 20 ಜುಲೈ 2012, 11:40 IST

ಶಿರಾ: ಮೂರುವರೇ ವರ್ಷದ ಮಗುವನ್ನು ಕೊಠಡಿಯಲ್ಲೇ ಕೂಡಿ ಹಾಕಿ ತಮ್ಮೂರಿಗೆ ತೆರಳಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಗುರುವಾರ ಅಮಾನತು ಮಾಡಲಾಗಿದೆ.

ತಾಲ್ಲೂಕಿನ ವೀರಬೊಮ್ಮನಹಳ್ಳಿಯಲ್ಲಿ ಬುಧವಾರ ಸಂಜೆ ಸುಮಾರು 4 ಗಂಟೆಗೆ ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ ಕೆಲಸ ಮುಗಿಸಿ ತನ್ನೂರು ಯಾದಲಡಕಿಗೆ ತೆರಳುವ ತರಾತುರಿಯಲ್ಲಿ ಕೊಠಡಿಯಲ್ಲೇ ದೀಪಿಕಾ ಎಂಬ ಬಾಲಕಿಯನ್ನು ಕೂಡಿಹಾಕಿದ್ದರು.

ಮಗು ಸಂಜೆ ಆರು ಗಂಟೆಯಾದರೂ ಮನೆಗೆ ಬಾರದಿದ್ದರಿಂದ ಆತಂಕಕ್ಕೊಳಗಾದ ತಂದೆ ಮಹೇಶ್ ಮತ್ತು ಗ್ರಾಮಸ್ಥರು ಮಗುವಿಗಾಗಿ ಊರಲ್ಲಿ ಹುಡುಕಾಡಿದರು ಪತ್ತೆಯಾಗಿರಲಿಲ್ಲ. ಕೊನೆಗೆ ಅಂಗನವಾಡಿ ಕೊಠಡಿಯಿಂದ ಕ್ಷೀಣ ಸ್ವರದಲ್ಲಿ ಮಗುವಿನ ಅಳು ಕೇಳಿ ಬಂದಿತ್ತು. ಆಗ ಕೊಠಡಿಯ ಬಾಗಿಲು ಮುರಿದರು. ಅಸ್ವಸ್ಥಗೊಂಡಿತಿದ್ದ ಮಗು ಅಮ್ಮೋ ಎಂದು ಆಚೆ ಬಂತು.

ಕೊಠಡಿ ಕಿಟಕಿ, ಬಾಗಿಲು ಮುಚ್ಚಿದ್ದರಿಂದ ಗಾಳಿ, ಬೆಳಕು ಇಲ್ಲದೆ ಕತ್ತಲೆಯಲ್ಲಿ ಎರಡು ಗಂಟೆ ಮಗು ನರಳಿದ್ದರಿಂದ ತೀವ್ರ ಮಂಕಾಗಿತ್ತು. ಇದನ್ನು ಕಂಡು ಗಾಬರಿಯಾದ ಪೋಷಕರು ಬರಗೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.

ಬೆಳಿಗ್ಗೆ ಗ್ರಾಮಸ್ಥರು ಕಾರ್ಯಕರ್ತೆ ನಿರ್ಲಕ್ಷ್ಯತನ ಖಂಡಿಸಿ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸಿದ್ದರು. ಮಹಿಳಾ ಮತ್ತು ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಸಿದ್ದಪ್ಪ ಕಾರ್ಯಕರ್ತೆಯನ್ನು ಅಮಾನತು ಮಾಡಿರುವುದಾಗಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.