ADVERTISEMENT

ಮರಳು ದಂಧೆ: ಮನೆಗೆ ನುಗ್ಗಿ ದಾಂದಲೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 7:45 IST
Last Updated 19 ಅಕ್ಟೋಬರ್ 2012, 7:45 IST

ಶಿರಾ: ನಮ್ಮ ಜಮೀನಿನಲ್ಲಿ ಮರಳು ತೆಗೆಯಬೇಡಿ ಎಂದು ತಡೆಯಲು ಹೋದ ಇಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆ ಬಗ್ಗೆ ಪೊಲೀಸರಿಗೆ ದೂರು ನೀಡಿದರೆಂದು ಮನೆಗೆ ನುಗ್ಗಿ ದಾಂದಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಕೆ.ಎಂ.ರಮೇಶ್ ಮತ್ತು ಹೇಮಂತಕುಮಾರ್ ಎಂಬುವರು ತಾಲ್ಲೂಕಿನ ಬೊಮ್ಮರಸನಹಳ್ಳಿ ಸಮೀಪ ಜಮೀನು ಹೊಂದಿದ್ದರು. ಮರಳು ದಂಧೆಕೋರರು ಆ ಜಮೀನಿನಲ್ಲಿ ಪ್ರತಿದಿನ ಸುಮಾರು 80 ಲಾರಿಯಷ್ಟು ಮರಳನ್ನು ಅಕ್ರಮವಾಗಿ ಸಾಗಿಸುತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಳೆದ 11ರಂದು ರಮೇಶ್ ಮತ್ತು ಹೇಮಂತ್‌ಕುಮಾರ್ ಪ್ರಶ್ನಿಸಿದ್ದಕ್ಕೆ ಮರಳು ದಂಧೆಯಲ್ಲಿ ಪಾಲ್ಗೊಂಡಿದ್ದ ಸುಮಾರು 30 ಜನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದರು. ಪಟ್ಟಣಕ್ಕೆ ಹಿಂದಿರುಗಿದ ವಾಪಸ್ ಬಂದ ಅವರಿಬ್ಬರು ಪೊಲೀಸರು ಮತ್ತು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

ತಕ್ಷಣ ಕ್ರಮಕ್ಕೆ ಮುಂದಾದ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಳೆದ 11 ಮತ್ತು 13ರಂದು ಕಾರ್ಯಾಚರಣೆ ನಡೆಸಿ ನಾಲ್ಕು ಜೆಸಿಬಿ ಹಾಗೂ ಮೂರು ಲಾರಿ ವಶಕ್ಕೆ ಪಡೆದಿದ್ದರು.ಇದರಿಂದ ಕೆರಳಿದ ಮರಳು ದಂಧೆಯ ಪ್ರಮುಖ ಆರೋಪಿ ಪುಟ್ಟರಾಜು ಅಲಿಯಾಸ್ ಪುಟ್ಟಸಿದ್ದ ಎಂಬಾತ ತನ್ನ ಬಂಟನೊಂದಿಗೆ ಕಳೆದ 13ರಂದು ರಾತ್ರಿ ರಮೇಶ್ ಮನೆಗೆ ನುಗ್ಗಿ ಬಾಗಿಲನ್ನು ಒದ್ದು ಅವರ ಪತ್ನಿ ಮತ್ತು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.
 
ಬಲವಂತವಾಗಿ ಬಾಗಿಲು ತೆಗೆಸಿ ನಿನ್ನ ಗಂಡನಿಗೆ ಹೇಳು ಕೇಸ್ ವಾಪಸ್ ಪಡೆಯದಿದ್ದರೆ ನಿಮ್ಮ ಇಡೀ ಕುಟುಂಬವನ್ನು ಕೊಲೆ ಮಾಡಿ ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದ. ಆಗ ಮನೆಯಿಂದ ಹೊರಗಿದ್ದ ರಮೇಶ್‌ಗೂ ರಮೇಶ್‌ಗೂ ಪೋನ್ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ.

ಇದರಿಂದ ಗಾಬರಿಯಾದ ರಮೇಶ್ ಮತ್ತು ಹೇಮಂತ್‌ಕುಮಾರ್ ತಮ್ಮ ಪತ್ನಿ ಮಕ್ಕಳೊಂದಿಗೆ ನಗರ ಪೊಲೀಸ್ ಠಾಣೆಗೆ ದೌಡಾಯಿಸಿ ಮರಳು ದಂಧೆಯ ಪುಟ್ಟಸಿದ್ದ, ಜಿ.ಈರಣ್ಣ, ದೇವರಾಜು, ನಾಗರಾಜು, ಚಂದ್ರ ಹಾಗೂ ವೀರಕ್ಯಾತ ಎಂಬುವರ ಮೇಲೆ ದೂರು ನೀಡಿದ್ದಾರೆ.

ಸ್ಫೋಟಕ ಪತ್ತೆ
ಚಿಕ್ಕನಾಯಕನಹಳ್ಳಿ:
ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಬಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾದ ಘಟನೆ ಬುಧವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ ಶೆಟ್ಟಿಕೆರೆ ಗೇಟ್ ಬಳಿ ಹಲವು ವರ್ಷಗಳಿಂದ ನಾಗರಾಜಶೆಟ್ಟಿ ಎಂಬುವರು ಪೆಟ್ಟಿಗೆ ಅಂಗಡಿಯಿಟ್ಟು ವ್ಯಾಪಾರ ನಡೆಸುತ್ತಿದ್ದರು. ಈ ಪೆಟ್ಟಿಗೆ ಅಂಗಡಿಗೆ ಬುಧವಾರ ರಾತ್ರಿ ಶಾರ್ಟ್ ಸರ್ಕೀಟ್‌ನಿಂದಾಗಿ ಬೆಂಕಿ ತಗುಲಿದ ಕಾರಣ ಪೆಟ್ಟಿಗೆ ಅಂಗಡಿ ಉರಿಯಲಾರಂಭಿಸಿತು.

ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಈ ಸಂದರ್ಭದಲ್ಲಿ ಅಂಗಡಿಯಲ್ಲಿನ ಹಲವು ವಸ್ತುಗಳನ್ನು ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಸ್ಪೋಟಕ ವಸ್ತುಗಳಾದ ಜಿಲೆಟಿನ್ ಕಡ್ಡಿಗಳು, ಗನ್‌ಪೌಡರ್, ಪೆಟ್ಲುಪ್ಪು ಹಾಗೂ ಕೇಪ್‌ಗಳು ದೊರಕಿದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ವಿಷಯ ತಿಳಿದ ಮಾಲೀಕ ನಾಗರಾಜಶೆಟ್ಟಿ ತಲೆ ಮರೆಸಿಕೊಂಡಿದ್ದಾನೆ.

ಹಾವು ಕಚ್ಚಿ ಮಹಿಳೆ ಸಾವು
ತುರುವೇಕೆರೆ:
ತಾಲ್ಲೂಕಿನ ಮುನಿಯೂರಿನಲ್ಲಿ ಬುಧವಾರ ಸಂಜೆ ಜಯಂತಿ (42) ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.