ADVERTISEMENT

ಮರಳು ಸಾಗಣೆಗೆ ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:38 IST
Last Updated 17 ಮಾರ್ಚ್ 2014, 9:38 IST

ಕುಣಿಗಲ್‌: ತಾಲ್ಲೂಕಿನ ನಿಡಸಾಲೆ ಕೆರೆಯಲ್ಲಿ ಅಕ್ರಮ ಮರಳು ಸಾಗಣೆಯಲ್ಲಿ ತೊಡಗಿದ್ದ ವಾಹನ­ಗಳನ್ನು ಹಿಡಿದುಕೊಟ್ಟರೂ ಪೊಲೀಸರು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಶುಕ್ರವಾರ, ಶನಿವಾರ ಕೆರೆಯಲ್ಲಿ ಕೆಲಸ ಮಾಡುತ್ತಿದ್ದ ಲಾರಿಗಳನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದರು.   ಮರಳು ಸಾಗಣೆ ಕಾರ್ಯ ನಡೆಸುತ್ತಿದ್ದ ಜಯಣ್ಣ, ಕೃಷ್ಣ, ಲೋಕಿ ಎಂಬುವರ ವಿರುದ್ಧ ದೂರು ನೀಡಿದರು. ಪ್ರಕರಣ ದಾಖಲಿಸಲು ಸ್ಥಳೀಯ ಪೊಲೀಸರು ಹಿಂಜರಿದ ಹಿನ್ನೆಲೆಯಲ್ಲಿ ಡಿವೈಎಸ್‌ಪಿಗೆ ದೂರು ಸಲ್ಲಿಸಿದರು.

ಅಕ್ರಮ ಮರಳು ಸಾಗಣೆ ನಿಯಂತ್ರಣದ ಕೆಲಸ ಮಾಡುತ್ತಿದ್ದ ಕಂದಾಯ ಅಧಿಕಾರಿಗಳು ಇದೀಗ ಚುನಾವಣೆ ನೆಪವೊಡ್ಡಿ ಅಕ್ರಮವನ್ನು ಕಂಡೂ ಕಾಣದಂತಿದ್ದಾರೆ ಎಂದು ಮುಖಂಡರಾದ ಸತೀಶ, ಸುರೇಶ, ದೀಪು, ಬಾಬು ದೂರಿದರು.

ಹುಲಿಯೂರುದುರ್ಗ ಹೋಬಳಿಯ ಉಜ್ಜಿನಿ ಗ್ರಾಮದ ಸಮೀಪವಿರುವ ನಿಡಸಾಲೆಕೆರೆ (ಶಿವನಹಳ್ಳಿಕೆರೆ) ೪೦೦ ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಗೆ ಹೊಂದಿಕೊಂಡಂತೆ ದೊಡ್ಡ ತೊರೆಯೂ ಇದೆ. ತೊರೆಯಿಂದ ಈಗಾಗಲೇ ನೂರಾರು ಲೋಡ್ ಮರಳು ಎತ್ತುವಳಿ ಮಾಡಲಾಗಿದೆ. ಇದೀಗ ಕೆರೆಯಲ್ಲಿರುವ ಮರಳಿಗೆ ಮರಳು ಮಾಫಿಯಾ ಕಣ್ಣು ಹಾಕಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮದ ಟ್ರ್ಯಾಕ್ಟರ್ ಮಾಲೀಕರಿಗೆ ಹಣದ ಆಮಿಷ ತೋರಿಸಿ, ಜೆಸಿಬಿ ಸಹಾಯದಿಂದ ಕೆರೆಯ ಮರಳನ್ನು ಎತ್ತುವಳಿ ಮಾಡಿ, ಮುಖ್ಯ ರಸ್ತೆ ಬದಿಯಲ್ಲಿನ ಗೋಮಾಳದಲ್ಲಿ ರಾಶಿ ಹಾಕಲಾ­ಗು­ತ್ತದೆ. ರಾತ್ರಿ ವೇಳೆ  ಬೖಹತ್ ಲಾರಿಗಳಲ್ಲಿ ತುಂಬಿಸಿ, ಕಳ್ಳ ಮಾರ್ಗದ ಮೂಲಕ ಬೆಂಗಳೂರಿಗೆ ಸಾಗಿಸಲಾಗುತ್ತಿದೆ. ವಿಪರೀತ ಪ್ರಮಾಣದಲ್ಲಿ ಮರಳು ಎತ್ತಿರುವ ಕಾರಣ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್‌ಗಳು ಬಣಗುಡುತ್ತಿವೆ ಎಂದು ಹೇಳಿದರು.

ಪೊಲೀಸರೂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ­ವಾಗಿಲ್ಲ. ಮರಳು ಸಾಗಣೆ ವಿರೋಧಿಸುವವರಿಗೆ ಮಾಫಿಯಾದವರೇ ಕೊಲೆ ಬೆದರಿಕೆ ಹಾಕಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಶುಕ್ರವಾರ ರಾತ್ರಿ ಕೆರೆಯಲ್ಲಿದ್ದ ಒಂದು ಜೆಸಿಬಿ, ಮರಳು ತುಂಬಿದ ಮೂರು ಲಾರಿ, ಮತ್ತು ಶನಿವಾರ ರಾತ್ರಿ ಎರಡು ಲಾರಿಗಳನ್ನು ಹುಲಿಯೂರುದುರ್ಗ ಪೊಲೀಸರಿಗೆ ಒಪ್ಪಿಸಿದರು.

ಹುಲಿಯೂರುದುರ್ಗ ಠಾಣೆಯ ಪೊಲೀಸರು ಮರಳು ಮಾಫಿಯಾದೊಂದಿಗೆ ಶಾಮೀಲಾಗಿ, ಗ್ರಾಮೀಣ ರಸ್ತೆಗಳ ಮೂಲಕ ಲಾರಿಗಳು ಮಾಗಡಿ ತಾಲೂಕಿನ ಗಡಿ ಮುಟ್ಟಲು ಸಹಕರಿಸುತ್ತಿದ್ದಾರೆ. ಉಜ್ಜಿನಿ ಗ್ರಾಮದ ಕೆಲವರು ಕೖಷಿ ಉದ್ದೇಶಕ್ಕೆ ಟ್ರ್ಯಾಕ್ಟರ್ ಖರೀದಿಸಿ ಮರಳು ಸಾಗಣೆಯಲ್ಲಿ ತೊಡಗಿಕೊಂಡಿದ್ದಾರೆ.

ಮರಳು ಸಾಗಣೆಯ ಪರ ಮತ್ತು ವಿರುದ್ಧದ ಎರಡು ಗುಂಪುಗಳು ಗ್ರಾಮದಲ್ಲಿ ಹುಟ್ಟಿ­ಕೊಂಡಿದ್ದು, ಗ್ರಾಮದ ಶಾಂತಿ ಕದಡಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.