ADVERTISEMENT

ಮಾರಿಪಾಳ್ಯಕ್ಕೂ ಹಬ್ಬಿದ ಕಾಲು ಬಾಯಿ ಜ್ವರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 9:30 IST
Last Updated 18 ಡಿಸೆಂಬರ್ 2013, 9:30 IST

ತೋವಿನಕೆರೆ: ಅನುಪಲು ಪಕ್ಕದ ಮಾರಿ­ಪಾಳ್ಯದಲ್ಲೂ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು, ಮಂಗಳವಾರ ಎರಡು ಹಸು ಮೃತಪಟ್ಟಿವೆ. ಇನ್ನೂ ಕೆಲ ಹಸುಗಳ ಸ್ಥಿತಿ ಗಂಭೀರವಾಗಿದೆ.

ಗ್ರಾಮದ ದಿನೇಶ್‌ ಎಂಬುವರ ಎರಡು ಹಸುಗಳು ಸತ್ತಿದ್ದು, ಉಳಿದ ಮೂರು ಹಸುಗಳ ಸ್ಥಿತಿ ಚಿಂತಾಜನಕ­ವಾಗಿದೆ. ಮೃತ ಹಸುಗಳ ಮೌಲ್ಯ ₨ 80 ಸಾವಿರದ ಆಸುಪಾಸು ಎಂದು ಅಂದಾಜು ಮಾಡಲಾಗಿದೆ.

ಹೈನೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ದಿನೇಶ್‌ ‘ಪ್ರಜಾವಾಣಿ’ ಜತೆ ಮಾತನಾಡಿ ಏನು ಮಾಡಬೇಕು ಎಂಬುದೇ ತೋಚದಾಗಿದೆ. ನನ್ನ ಹಸು­ಗಳು ಉಳಿದರೆ ನನ್ನ ಕುಟುಂಬ ಉಳಿ­ದಂತೆ ಎಂದು ಗದ್ಗದಿತರಾದರು.

ಈ ಭಾಗದಲ್ಲಿ ರೋಗ ಹಬ್ಬುತ್ತಿರು­ವು­ದರಿಂದ ಮಂಗಳವಾರ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಜಂಟಿ ನಿರ್ದೇಶಕ ಡಾ.ಗಿರಿ­ಧರ್‌, ವಿಜ್ಞಾನಿ ಡಾ.ಚಂದ್ರಶೇಖರ್ ಅನುಪಲು ಹಾಗೂ ಮಾರಿಪಾಳ್ಯಕ್ಕೆ ಭೇಟಿ ನೀಡಿ, ಹಸುಗಳನ್ನು ಪರೀಕ್ಷಿಸಿದರು. ಜತೆಗೆ ಸತ್ತ ಹಸುಗಳ ಮಾದರಿ ಸಂಗ್ರಹಿಸಿದರು.

ಶಾಸಕ ಪಿ.ಆರ್.ಸುಧಾಕರಲಾಲ್ ಸೋಮವಾರ ರಾತ್ರಿ ಅನುಪಲು ಗ್ರಾಮಕ್ಕೆ ಭೇಟಿ ನೀಡಿ ನೊಂದ ರೈತರ ಜತೆ ಮಾತುಕತೆ ನಡೆಸಿದರು.

ಜತೆಯಲ್ಲಿದ್ದ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಪರಮೇಶ್ವರಪ್ಪ ಅವರಿಗೆ ಕಾಯಿಲೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜ್ವರದಿಂದ ನರಳುತ್ತಿರುವ ಹಸುಗಳಿಗೆ ಸೂಕ್ತ ಚಿಕಿತ್ಸೆ, ಸತ್ತಿರುವ ಹಸು, ಮೇಕೆ, ಕುರಿಗಳಿಗೆ ಪರಿಹಾರ ವಿತರಿಸುವಂತೆ ಸೂಚಿಸಿದರು.

ಕೊರಟಗೆರೆ ತಾಲ್ಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರವಿ, ತೋವಿನಕೆರೆ ಪಶುವೈದ್ಯಾಧಿಕಾರಿ ಮಂಜುನಾಥ, ವಿಸ್ತಾರಣಾಧಿಕಾರಿ ನಂಜೇಗೌಡ, ಟಿ.ಆರ್.ನಾಗರಾಜು, ಮುಖಂಡರಾದ ಮರಿರಂಗಯ್ಯ, ನಾಗಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.