ADVERTISEMENT

ಮಾರುಕಟ್ಟೆ ಸ್ಥಳಾಂತರ: ವ್ಯಾಪಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 9:45 IST
Last Updated 11 ನವೆಂಬರ್ 2012, 9:45 IST

ಶಿರಾ: ಮಾರುಕಟ್ಟೆ ಸ್ಥಳಾಂತರದಿಂದ ಅತಂತ್ರರಾಗಿರುವ ವ್ಯಾಪಾರಿಗಳು ನಗರದಲ್ಲಿ ಶನಿವಾರ ರಸ್ತೆ ತಡೆ ಸೇರಿದಂತೆ ಸರಣಿ ಪ್ರತಿಭಟನೆ ನಡೆಸಿದರು.

ಎರಡು ದಿನಗಳ ಹಿಂದೆ ನಗರಸಭೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ತರಕಾರಿ ಹಾಗೂ ಹೂವಿನ ವ್ಯಾಪಾರಿಗಳನ್ನು ಸ್ಥಳಾಂತರಿಸಿದ್ದರಿಂದ ಹಳೆ ಮಾರುಕಟ್ಟೆಯ ವ್ಯಾಪಾರಿಗಳು ಲಕ್ಷ್ಮಿನಾರಾಯಣ ಕಲ್ಯಾಣ ಮಂಟಪದ ಬಳಿ ರಸ್ತೆಗೆ ತರಕಾರಿ ಸುರಿದು ಪ್ರತಿಭಟಿಸಿದರು.

ಮೊದಲಿನ ಮಾರುಕಟ್ಟೆ ನಗರದ ಮಧ್ಯದಲ್ಲಿದ್ದು, ಎಲ್ಲ ಭಾಗದ ಜನತೆಗೂ ಸಮೀಪವಿತ್ತು. ತರಕಾರಿ ಜತೆಗೆ ದಿನಸಿ, ಜವಳಿ ಸೇರಿದಂತೆ ಅವಶ್ಯಕ ವಸ್ತುಗಳು ಇದೇ ಜಾಗದಲ್ಲಿ ಸಿಗುವಂತಿತ್ತು. ಈಗಿನ ಹೊಸ ಮಾರುಕಟ್ಟೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಹಿಂಭಾಗದಲ್ಲಿದ್ದು, ತರಕಾರಿ ಕೊಳ್ಳಲು ಬರುವ ಜನತೆಗೆ ದೂರವಾಗುತ್ತದೆ. ಆದ್ದರಿಂದ ಹಿಂದಿನಂತೆ ಹಳೆ ಮಾರುಕಟ್ಟೆ ಬಳಿಯೇ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು ಗುಂಪಾಗಿ ಸೇರಿ ಸಾರಿಗೆ ಬಸ್ ನಿಲ್ದಾಣದ ಮುಂದೆ ದಿಢೀರ್ ರಸ್ತೆತಡೆ ನಡೆಸಿದರು. ಬಾಳೆಹಣ್ಣು ಮಾರುವ ತಳ್ಳು ಗಾಡಿಗಳನ್ನು ರಸ್ತೆಗೆ ಅಡ್ಡಲಾಗಿಟ್ಟು ರಸ್ತೆ ಬಂದ್ ಮಾಡಿದರು. ಪ್ರತಿಭಟನಾಕಾರರ ಜತೆ ಸಾಕಷ್ಟು ಜನ ಜಮಾಯಿಸಿದ್ದರಿಂದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲೇ ಆಗಮಿಸಬೇಕಾಯಿತು. ಸಿಪಿಐ ಪ್ರಹ್ಲಾದ್ ನೇತೃತ್ವದ ಪೊಲೀಸರು ಪರಿಸ್ಥಿತಿ ಹತೋಟಿಗೆ ಶ್ರಮಿಸಿದರು. ಸುಮಾರು 20 ನಿಮಿಷ ಕಳೆದ ನಂತರ ರಸ್ತೆ ತಡೆ ತೆರವುಗೊಳಿಸಿದರು.

ಅಷ್ಟರಲ್ಲಿ ಕೆಲವರು ಈ ಎಲ್ಲಕ್ಕೂ ನಗರಸಭೆಯೇ ಕಾರಣವಾಗಿದ್ದು, ನಮ್ಮಿಂದ ಸುಂಕ ವಸೂಲಿ ಮಾಡಿದ್ದೂ ಅಲ್ಲದೆ ಬಲವಂತವಾಗಿ ಜಾಗ ಖಾಲಿ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ನಗರಸಭೆ ಕಚೇರಿಯತ್ತ ಧಾವಿಸಿದರು. ಆದರೆ ಎರಡನೆ ಶನಿವಾರವಾದ್ದರಿಂದ ನಗರ ಸಭೆಯಲ್ಲಿ ಯಾವ ಅಧಿಕಾರಿಯೂ ದೊರಕದೆ ಬಾಗಿಲ ಬಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.