ADVERTISEMENT

ಮಾವಿನ ಮಡಿಲಲ್ಲಿ ನಾಟಿ ಮೀನಿನ ಘಮಲು

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 9:55 IST
Last Updated 7 ಜೂನ್ 2011, 9:55 IST

ಶ್ರೀನಿವಾಸಪುರ: ತಾಲ್ಲೂಕಿನ ಆಳದ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಸ್ಥಳೀಯ ಸಂತೆ ಹಾಗೂ ಮಾರುಕಟ್ಟೆಗಳಿಗೆ ಮೀನಿನ ಆವಕದ ಪ್ರಮಾಣ ಹೆಚ್ಚಿದೆ. ಮೀನು ಪ್ರಿಯರ ಬಾಯಲ್ಲಿ ನೀರೂರಿಸುವ ಮೀನು ಸಿಗುತ್ತಿದೆಯಾದರೂ ಬೆಲೆ ಮಾತ್ರ ಬೆಚ್ಚಿಬೀಳಿಸುತ್ತದೆ.

ಮೀನು ಪ್ರಿಯರು, ಸಾಕಿದ ಮೀನಿಗಿಂತ ಹೆಚ್ಚು ರುಚಿಕರ ಎಂದು ಹೇಳಲಾದ ಗಿರ‌್ಲು, ಕೊಡದೆ, ಚೇಳು, ಉಣಸೆ, ಮಾರುವೆ ಮುಂತಾದ ನಾಟಿ ಮೀನನ್ನು ಹೆಚ್ಚು ಇಷ್ಟಪಡುತ್ತಾರೆ. ತಾಲ್ಲೂಕಿನ ಗಡಿ ಭಾಗದ ಬೆಟ್ಟದಂಚಿನ ಆಳವಾದ ಪುಟ್ಟ ಕೆರೆಗಳಲ್ಲಿ ನಾಟಿ ಮೀನು ಹೆಚ್ಚಾಗಿ ಸಿಗುತ್ತದೆ. ಆದರೆ ಈ ಮೀನುಗಳ ಬೆಲೆ ಕೆಜಿ ಯೊಂದಕ್ಕೆ ರೂ. 150ರಿಂದ 170ರವರೆಗೆ ಇದೆ. ಬೆಲೆ ಹೆಚ್ಚೆಂಬ ಮಾತು ಕೇಳಿಬರುತ್ತದೆ. ಆದರೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಮೀನಿನ ಬುಟ್ಟಿ ಕಾಣಿಸಿದರೆ ಸಾಕು ಜನ ಸುತ್ತವರೆದು ಹೇಳಿದ ಬೆಲೆಗೆ ಖರೀದಿಸುವುದು ಸಾಮಾನ್ಯ.

ಗ್ರಾಮೀಣ ಪ್ರದೇಶದಲ್ಲಿ ನೀರಿನ ಆಸರೆ ಇರುವ ಕಡೆಗಳಲ್ಲಿ ಜನ ಬಲೆ, ಮೆಷ್, ಗೂಡು ಮತ್ತು ಕೊಡಮೆಗಳನ್ನು ಬಳಸಿ ಮೀನು ಹಿಡಿಯುವ ದೃಶ್ಯ ಸಾಮಾನ್ಯವಾಗಿದೆ. ಮೀನು ಹಿಡಿಯುವಲ್ಲಿ ಗ್ರಾಮೀಣ ಮಹಿಳೆಯರೂ ಹಿಂದೆ ಬಿದ್ದಿಲ್ಲ. ತೆಳುವಾದ ಸೀರೆಗಳನ್ನು ಬಲೆಯಂತೆ ಬಳಸಿ ಕಡಿಮೆ ಆಳದ ಕೆರೆ ಕುಂಟೆಗಳಲ್ಲಿ ಮೀನು ಹಿಡಿಯುತ್ತಾರೆ.

ಹಿಂದೆ ಕೆರೆಗಳು ಸುಸ್ಥಿತಿಯಲ್ಲಿದ್ದಾಗ ಗ್ರಾಮದ ಜನರೆಲ್ಲಾ ಸೇರಿ ಮೀನು ಹಿಡಿದು ಹಂಚಿಕೊಂಡು ಸವಿಯುತ್ತಿದ್ದರು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ. ಮೀನುಗಾರಿಕೆ ಇಲಾಖೆ ದೊಡ್ಡ ಮತ್ತು ಆಳವಾದ ಕೆರೆಗಳನ್ನು ಹರಾಜು ಹಾಕುವ ಪದ್ಧತಿಯನ್ನು ಜಾರಿಗೆ ತಂದಮೇಲೆ, ಹಳ್ಳಿಗರು ಮೀನಿನ ಮೇಲೆ ಹಕ್ಕನ್ನು ಕಳೆದುಕೊಂಡರು.

ಹರಾಜಿನಲ್ಲಿ ಕೆರೆಗಳನ್ನು ಪಡೆದುಕೊಂಡವರು ಮಾಂಸಾಹಾರಿ ಮೀನುಗಳು ಸೇರಿದಂತೆ ದೊಡ್ಡ ಜಾತಿಯ ಮೀನನ್ನು ಸಾಕಲು ಪ್ರಾರಂಭಿಸಿದರು. ಅವು ನಾಟಿ ಮೀನುಗಳನ್ನು ಆಹಾರವಾಗಿ ಬಳಸಿದ ಪರಿಣಾಮವಾಗಿ ಸ್ಥಳೀಯ ಮೀನು ಪ್ರಭೇದಗಳು ಕಣ್ಮರೆಯಾಗತೊಡಗಿದವು. ದೈತ್ಯ ಮೀನು ಸಾಕದ ಸಣ್ಣ ಪುಟ್ಟ ಕೆರೆ ಕುಂಟೆಗಳಲ್ಲಿ ಮಾತ್ರ ಕೆಲವು ಜಾತಿಯ ನಾಟಿ ಮೀನುಗಳು ಉಳಿದುಕೊಂಡಿವೆ.

ಬಯಲು ಸೀಮೆಯಲ್ಲಿ ಕೆರೆಗಳು ಹೂಳು ತುಂಬಿ ಹಾಳಾದ ಪರಿಣಾಮವಾಗಿ ಮೀನು ಸಿಗುವುದು ಅಪರೂಪವಾಗಿದೆ. ಇದು ಬೆಲೆ ಏರಿಕೆಗೆ ದಾರಿಮಾಡಿಕೊಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.