ADVERTISEMENT

ಮುಂಗಾರು ಕೃಷಿಗೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 9:10 IST
Last Updated 4 ಜೂನ್ 2011, 9:10 IST

ಗುಬ್ಬಿ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಬೀಳುತ್ತಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿ ಬಿತ್ತನೆ ಕಾರ್ಯಕ್ಕೆ ಜಮೀನು ಹದಗೊಳಿಸಲು ಮುಂದಾಗಿದ್ದಾರೆ.

ಕಳೆದ ಅವಧಿಯಲ್ಲಿ 121 ಮಿ.ಮೀ. ಮಳೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಮೇ ಅಂತ್ಯಕ್ಕೆ 132 ಮಿ.ಮೀ. ಮಳೆಯಾಗಿದ್ದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ತಾಲ್ಲೂಕಿನಲ್ಲಿ ಒಟ್ಟು 1,425 ಹೆಕ್ಟೇರ್‌ನಲ್ಲಿ ಜೋಳ, ತೊಗರಿ, ಉದ್ದು, ಹೆಸರು, ಅಲಸಂದೆ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ.

ಈ ಬಾರಿ 51 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ ನಡೆದಿದೆ. ಕಳೆದ ಬಾರಿ 200 ಹೆಕ್ಟೇರ್ ತೊಗರಿ ಬಿತ್ತನೆ ಆಗಿತ್ತು. ಈಗ 270 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹೆಸರುಕಾಳು ಕಳೆದ ಬಾರಿ 725 ಹೆಕ್ಟೇರ್‌ನಷ್ಟಿತ್ತು. ಈ ಬಾರಿ  960 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ಡಾ.ಎಸ್. ಸಿದ್ದಲಿಂಗಪ್ರಸಾದ್.

ತಾಲ್ಲೂಕಿನ 6 ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, 1200 ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಕೊರತೆ ಇದೆ ಎನ್ನಲಾದ ಸತು, ಬೋರಾನ್ ನೀಗಿಸುವಲ್ಲಿ ಲಘು ಪೋಷಾಕಾಂಶದ ಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದರು.

696 ಕ್ವಿಂಟಲ್ ಭತ್ತ, 1,020 ಕ್ವಿಂಟಲ್ ರಾಗಿ ಅವಶ್ಯವಿದೆ. ಉಳಿದಂತೆ ಹೆಸರು 100 ಕ್ವಿಂಟಲ್, ತೊಗರಿ 81 ಕ್ವಿಂಟಲ್, ಉದ್ದು 60 ಕ್ವಿಂಟಲ್, ಅಲಸಂದೆ 130 ಕ್ವಿಂಟಲ್, ನೆಲಗಡಲೆ 154  ಕ್ವಿಂಟಲ್, ಜೋಳ 9 ಕ್ವಿಂಟಲ್, ಸೂರ್ಯಕಾಂತಿ 45 ಕ್ವಿಂಟಲ್ ದಾಸ್ತಾನಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.