ADVERTISEMENT

ಮೋದಿ, ಷಾ ಏಕತೆಯ ಶತ್ರುಗಳು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪ್ರೊ.ರಾಧಾಕೃಷ್ಣ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 10:39 IST
Last Updated 3 ಅಕ್ಟೋಬರ್ 2017, 10:39 IST
ಮೋದಿ, ಷಾ ಏಕತೆಯ ಶತ್ರುಗಳು
ಮೋದಿ, ಷಾ ಏಕತೆಯ ಶತ್ರುಗಳು   

ತುಮಕೂರು: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಅವರು ಈ ದೇಶದ ಏಕತೆಯ ಶತ್ರುಗಳು. ಹಿಂದೂಗಳ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ’ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಪ್ರೊ.ರಾಧಾಕೃಷ್ಣ ಟೀಕಿಸಿದರು.

ಸೋಮವಾರ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ಚುನಾವಣೆ ನಡೆಯಲಿವೆ. ಈ ಚುನಾವಣೆಗಳು ಈ ದೇಶದ ಮತ್ತು ಮಕ್ಕಳ ಭವಿಷ್ಯವನ್ನು ನಿರ್ಣಯ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದರು.

ADVERTISEMENT

ಸಿದ್ಧಾಂತ ತಳಹದಿಯ ಮೇಲೆ ಪಕ್ಷ ಬಲಪಡಿಸಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು ಎಲ್ಲರ ಹೊಣೆಯಾಗಿದೆ ಎಂದು ಹೇಳಿದರು.

ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 70 ಸಾವಿರ ಮನೆಗಳು ಬರುತ್ತವೆ. ಎಲ್ಲ ಮನೆಗಳಿಗೂ ಭೇಟಿ ನೀಡಬೇಕು. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರೆ ಸಿಡುಕಬಾರದು. ಅವರ ಭಾವನೆ ಅರ್ಥ ಮಾಡಿಕೊಂಡು ನಡೆದುಕೊಳ್ಳಬೇಕು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳನ್ನೂ ಪಕ್ಷದ ಸಂಘಟನೆಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಸಮರ್ಥವಾಗಿ ಬಳಸಿಕೊಳ್ಳಬೇಕು. ಪ್ರತಿಪಕ್ಷದವರು ಕಾಂಗ್ರೆಸ್ ಪಕ್ಷ ಮತ್ತು ಮುಖಂಡರ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯ, ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಕ್ರಿಯಿಸಬೇಕು ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು, ಪಕ್ಷದ ಉಸ್ತುವಾರಿಗಳಾದ ಅನಿಲ್‌ಕುಮಾರ್ ಪಾಟೀಲ್, ಸುವರ್ಣಮ್ಮ, ಯೋಗೇಶ್ವರಿ, ಗೋಪಿನಾಥ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಫ್ತಾಬ್ ಅಹಮ್ಮದ್, ನಂಜೇಗೌಡ ವೇದಿಕೆಯಲ್ಲಿದ್ದರು.

***
ಮೊದಲ ಬಾರಿಗೆ ಮನೆ ಮನೆಗೆ
ಇದೇ ಪ್ರಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷವು ಮನೆ ಮನೆಗೆ ಅಭಿಯಾನ ಪ್ರಾರಂಭಿಸಿದೆ ಎಂದು ರಾಧಾಕೃಷ್ಣ ಹೇಳಿದರು.

ಸಂಪೂರ್ಣ ಯಶಸ್ವಿಗೊಳಿಸುವುದು ಪಕ್ಷದ ಮುಖಂಡರು, ಕಾರ್ಯಕರ್ತರ ಹೊಣೆಯಾಗಿದೆ. ಅಕ್ಟೋಬರ್ 15ರೊಳಗೆ ಜಿಲ್ಲೆಯಲ್ಲಿ ಈ ಅಭಿಯಾನ ಪೂರ್ಣಗೊಂಡು ಪಕ್ಷದ ವರಿಷ್ಠರಿಗೆ ಮಾಹಿತಿ ರವಾನೆಯಾಗಬೇಕು  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.