ADVERTISEMENT

ಮೌಢ್ಯ ವಿರೋಧಿ ಮಸೂದೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 10:26 IST
Last Updated 9 ಡಿಸೆಂಬರ್ 2013, 10:26 IST

ತುಮಕೂರು: ಸಮಾಜವನ್ನು ಹಿಂದಕ್ಕೆ ಎಳೆಯುತ್ತಿರುವ ಮೌಢ್ಯವನ್ನು ಪ್ರಶ್ನಿಸಬೇಕಿದೆ. ಹೊಟ್ಟೆ ನೋವಿಗೆ ತಾಯತ ಮದ್ದಲ್ಲ ಎಂಬುದನ್ನು ಪ್ರಶ್ನಿಸುವ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಸೈಯದ್‌ ಮುಜೀಬ್‌ ತಿಳಿಸಿದರು.

ನಗರದ ಬಿಎಸ್‌ಎನ್‌ಎಲ್‌ ಕಚೇರಿ ಮುಂದೆ ಭಾನುವಾರ ಮೂಢನಂಬಿಕೆ ವಿರೋಧಿ ಮಸೂದೆ ಜಾರಿಗೆ ಒತ್ತಾಯಿಸಿ, ಮಡೆಸ್ನಾನ, ಪಂಕ್ತಿಬೇಧ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜಾತಿ ತಾರತಮ್ಯವನ್ನು ಪ್ರತಿಪಾದಿಸುವ ಉಡುಪಿ ಶ್ರೀಕೃಷ್ಣ ಮಠದ ಪಂಕ್ತಿ ಬೇಧ, ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವ ಮಡೆ ಸ್ನಾನ ಜನರನ್ನು ಶೋಷಣೆ ಮಾಡುವ ಪದ್ಧತಿಗಳು. ಸರ್ಕಾರ ಇವುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಪೇಜಾವರ ವಿಶ್ವೇಶ್ವ ತೀರ್ಥ ಸ್ವಾಮೀಜಿ  ಮಡೆಸ್ನಾನಕ್ಕೆ ಊಟದ ಬದಲು ಪ್ರಸಾದ ಬಳಸಬಹುದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿ­ದ್ದಾರೆ. ನಿಡುಮಾಮಿಡಿ ಸ್ವಾಮೀಜಿ ಮೂಢ­ನಂಬಿಕೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಾವು ದೇವರ ನಂಬಿಕೆಗಳ ವಿರೋಧಿಗಳಲ್ಲ ಎಂದು ಹೇಳಿದರು.

ನಾಗರಿಕರನ್ನು ಮೂಢನಂಬಿಕೆ­ಗಳಿಂದ ವಂಚಿಸುತ್ತಿ­ರುವ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತಿ­ದ್ದೇವೆ. ಈ ಹೋರಾಟಕ್ಕೆ  ಜನರು ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರು.

ಸಿಪಿಎಂ ಮುಖಂಡ ಷಣ್ಮುಖಪ್ಪ, ಡಿವೈಎಫ್‌ಐ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌. ರಾಘವೇಂದ್ರ, ಸ್ಲಂ ಜನಾಂದೋಲನ ಸಮಿತಿಯ ನರಸಿಂಹಮೂರ್ತಿ, ಕೊಳಗೇರಿ ಹಿತರಕ್ಷಣಾ ಸಮಿತಿಯ ಅಲ್ತಾಫ್‌ ಮೊದಲಾದವರು ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಜೂನಿ, ವೆಂಕಟೇಶ್‌, ಮೈಲಾರಪ್ಪ, ಷಾಂತಜ್‌, ಸ್ವಾಮಿ, ಅಜ್ಜಪ್ಪ, ಎಸ್‌ಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಣ್ಣ ಇತರರು    ಪ್ರತಿಭಟನೆ­ಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.