ADVERTISEMENT

ಮೌನವಾದ ‘ಮುಖವೀಣೆ’

ಹಿರಿಯ ಕಲಾವಿದ ಲಿಂಗಪ್ಪ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2013, 8:58 IST
Last Updated 11 ಅಕ್ಟೋಬರ್ 2013, 8:58 IST

ತುರುವೇಕೆರೆ: ತಾಲ್ಲೂಕಿನ ಹಿರಿಯ ಮುಖವೀಣೆ ಕಲಾವಿದ ಲಿಂಗಪ್ಪ ದಂಡಿನಶಿವರದ (95) ತಮ್ಮ ಸ್ವಗ್ರಾಮ ದುಂಡದಲ್ಲಿ ಗುರುವಾರ ನಿಧನರಾದರು.

ತಮ್ಮ ತಂದೆಯವರಿಂದ ಮುಖವೀಣೆ ನುಡಿಸುವುದನ್ನು ಕಲಿತ ಲಿಂಗಪ್ಪ ಮುಖವೀಣೆಯನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದರು. ಸಾವಿರಾರು ಯಕ್ಷಗಾನ ಪ್ರದರ್ಶನಗಳಿಗೆ ಲಿಂಗಪ್ಪ ಮುಖವೀಣೆ ಸಾಥ್ ನೀಡಿ ಸೈ ಎನಿಸಿಕೊಂಡಿದ್ದರು.

ಮೂಡಲಪಾಯ ಯಕ್ಷಗಾನಕ್ಕಂತೂ ಮುಖವೀಣೆ ಪ್ರಸಂಗಕ್ಕೆ  ಕಳೆದುಂಬಿಸುವ ವಾದ್ಯವಾಗಿ ಹೆಸರು ಪಡೆದಿತ್ತು. ಮುಖವೀಣೆ ಇಲ್ಲದಿದ್ದರೆ ಪ್ರಸಂಗವೇ ಕಳೆಗಟ್ಟದು ಎನ್ನುವಷ್ಟರ ಮಟ್ಟಿಗೆ ಇವರು ವಾದನದಲ್ಲಿ ತಾದಾತ್ಮ್ಯ ಸಾಧಿಸಿದ್ದರು. 95ರ ಇಳಿ ವಯಸ್ಸಿನಲ್ಲೂ ಯಕ್ಷಗಾನ ಪ್ರಸಂಗಕ್ಕೆ ಮುಖವೀಣೆ ನುಡಿಸಿದ್ದರು.   

ತಮ್ಮಿಂದ ಯಾರೂ ಮುಖವೀಣೆ ವಿದ್ಯೆಯನ್ನು ಕಲಿಯಲಿಲ್ಲ. ಈ ಕಲೆ ತಮ್ಮೊಂದಿಗೇ ಹೊರಟು ಹೋಗುತ್ತಿದೆ ಎಂದು ಬೇಸರ ಲಿಂಗಪ್ಪನ ಅವರಲ್ಲಿತ್ತು. ಇವರ ನಿಧನಕ್ಕೆ ತಾಲ್ಲೂಕಿನ ಜನಪದ ಕಲಾವಿದರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮೃತರಿಗೆ ಐವರು ಮಕ್ಕಳಿದ್ದಾರೆ.

ಮುಖವೀಣೆಯ ಕೊನೆ ಕೊಂಡಿ ಕಳಚಿ ಹೋಯಿತು ಎಂದು ಮುನಿಯೂರಿನ ಮೂಡಲಪಾಯ ಯಕ್ಷಗಾನದ ಭಾಗವತ ದಾಸಾಚಾರ್ ತೀವ್ರ ವಿಷಾಧ ವ್ಯಕ್ತಪಡಿಸಿದ್ದಾರೆ.

ದಂ.ಸ.ಗಂಗಾಧರ ಗೌಡ, ದುಂಡ ಕುಮಾರ್, ಗ್ರಾ.ಪಂ.ಅಧ್ಯಕ್ಷ ಶಿವರಾಜ್, ಡಿ.ಕೆ.ನಾಗರಾಜ್, ದಂಡಿನಶಿವರ ತಿಮ್ಮೇಗೌಡ  ಇತರರು ಲಿಂಗಪ್ಪನವರಿಗೆ ಅಂತಿಮ ನಮನ ಸಲ್ಲಿಸಿದರು. ಗುರುವಾರ ಸಂಜೆ ದುಂಡದಲ್ಲಿ ಮೃತರ ಅಂತ್ಯ ಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT