ಮಾಜಿ ಸಚಿವರ ಪುತ್ರನ ತೋಟಕ್ಕೆ ಬೆಂಕಿ
ಕುಣಿಗಲ್: ಮಾಜಿ ಸಚಿವ ಡಿ.ನಾಗರಾಜಯ್ಯ ಅವರ ಪುತ್ರನಿಗೆ ಸೇರಿದ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ನೂರಾರು ಗಿಡ ಮರಗಳು ನಾಶವಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ತಾಲ್ಲೂಕಿನ ಟಿ.ಹೊಸಹಳ್ಳಿಯಲ್ಲಿರುವ ಮಾಜಿ ಸಚಿವರ ಪುತ್ರ ಬಿ.ಎನ್.ಲೊಕೇಶ್ ಅವರಿಗೆ ಸೇರಿದ 45ಎಕರೆ ಪ್ರದೇಶದ ತೋಟದ ಪಾರ್ಶ್ವಭಾಗದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ತೀವ್ರತೆ ಹೆಚ್ಚಾಗಿ ಕೆಲಸದ ಆಳುಗಳು ಅಗ್ನಿಶಾಮಕ ಠಾಣೆಗೆ ಸುದ್ದಿಯನ್ನು ಮುಟ್ಟಿಸಿದರು. ಪಟ್ಟಣದಿಂದ ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯವರೆವಿಗೂ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದರು.
ಘಟನೆಯಲ್ಲಿ 165 ಅಡಿಕೆ ಮರ, 650 ತೇಗ, 50 ಸಪೋಟ ಸೇರಿದಂತೆ ಬಾಳೆ, ಮಾವು, ತೆಂಗು, ಬಿದಿರಿನ ಮರಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ಡಾ.ರವಿ ಎಂ.ತಿರ್ಲಾಪುರ್, ಸಿಪಿಐ ಬಿ.ಕೆ.ಶೇಖರ್, ಪಿಎಸ್‌ಐ ಚನ್ನಯ್ಯಹಿರೇಮಠ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿ.ಎನ್.ಲೊಕೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಗುಬ್ಬಿಯಲ್ಲಿ 5 ಅಂಗಡಿ ಭಸ್ಮ
ಗುಬ್ಬಿ: ಪೆಟ್ಟಿಗೆ ಅಂಗಡಿಗಳ ಸಾಲಿಗೆ ಆಕಸ್ಮಿಕ ಬೆಂಕಿ ತಗುಲಿ 5 ಅಂಗಡಿಗಳು ಸಂಪೂರ್ಣ ಭಸ್ಮವಾಗಿ ಸುಮಾರು ರೂ.4.16 ಲಕ್ಷ ನಷ್ಟ ಉಂಟಾದ ಘಟನೆ ಮಂಗಳವಾರ ಮುಂಜಾನೆ ತಾಲ್ಲೂಕಿನ ಕಲ್ಲೂರು ಕ್ರಾಸ್ ಬಳಿ ನಡೆದಿದೆ.
ಅಪಾರ ನಷ್ಟಕ್ಕೆ ಅಂಗಡಿಗಳ ಸಾಲುಗಳಲ್ಲಿ ಒಣಗಿದ ತೆಂಗಿನ ಗರಿ ಹಾಸು ಹಾಗೂ ಅದರ ಸಮೀಪದಲ್ಲೇ ಹಾದು ಹೋದ ವಿದ್ಯುತ್ ತಂತಿ ಕಾರಣವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಬೆಂಕಿ ಅವಘಡ ಮುಂಜಾನೆ ಸಂಭವಿಸಿದ ಕಾರಣ ಸಾರ್ವಜನಿಕರ ಅರಿವಿಗೆ ಬರುವ ಮೊದಲಿಗೆ ಅಂಗಡಿಗಳು ಭಸ್ಮವಾಗಿದ್ದವು. ಅಗ್ನಿ ಶಾಮಕ ದಳ ಹಾಗೂ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸಲಾಯಿತು.
ರೇಣುಕಪ್ಪ, ಅಮೃತ ಹಾಗೂ ಲಕ್ಷ್ಮಮ್ಮ ಅವರ ಚಿಲ್ಲರೆ ಅಂಗಡಿಯಲ್ಲಿದ್ದ ದವಸ ಧಾನ್ಯ ಬೆಂಕಿಗೆ ಆಹುತಿಯಾಗಿ ಸುಮಾರು ರೂ.2.20 ಲಕ್ಷ ನಷ್ಟವಾಗಿದೆ. ಭಾಗ್ಯ ಎಂಬುವವರ ಮೊಬೈಲ್ ಶಾಪ್‌ನಲ್ಲಿದ್ದ ಒಂದು ಕಂಪ್ಯೂಟರ್ ಸೇರಿದಂತೆ ಮೊಬೈಲ್‌ನ ಬಿಡಿಭಾಗಗಳು ಬೂದಿಯಾಗಿವೆ. ಇದರಿಂದ ಭಾಗ್ಯ ಅವರಿಗೆ ರೂ.1.30 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ, ನಾರಾಯಣಪ್ಪ ಎಂಬುವವರ ಹೋಟೆಲ್‌ನಲ್ಲಿದ್ದ ಸಿಲಿಂಡರ್ ಸ್ಪೋಟವೆ ಬೆಂಕಿ ಹೆಚ್ಚಲು ಸಹಕಾರಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮಹಿಳೆ ಸಜೀವ ದಹನ
ಮಧುಗಿರಿ: ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಮಾಡಿದ ಪತಿ ಪೊಲೀಸರ ಅತಿಥಿಯಾಗಿದ್ದಾನೆ. ಪಟ್ಟಣದ ದರ್ಗಾರಸ್ತೆಯಲ್ಲಿ ವಾಸವಿದ್ದ ಲಾರಿ ಚಾಲಕ ಭಾಸ್ಕರ ಮಂಗಳವಾರ ಮಧ್ಯಾಹ್ನ ತನ್ನ ಎರಡನೇ ಪತ್ನಿ ಭಾಗ್ಯಮ್ಮ (22)ಳನ್ನು ಮನೆಯಲ್ಲಿ ಕೂಡಿಹಾಕಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ ಎನ್ನಲಾಗಿದೆ. ಮನೆಯಿಂದ ಬೆಂಕಿಯ ಜ್ವಾಲೆ ಹೊಬರುತ್ತಿರುವುದನ್ನು ಕಂಡ ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ತಕ್ಷಣ ಪಿಎಸ್‌ಐ ಆಂಜಪ್ಪ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಬಾಗಿಲು ಒಡೆದು ಬೆಂಕಿ ಆರಿಸಿದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸುಟ್ಟಗಾಯವಾಗದೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಪತಿ ಭಾಸ್ಕರನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ದಲಿತ ಮಹಿಳೆಯೊಬ್ಬಳ ಮೇಲೆ ಸೀಮೆಎಣ್ಣೆ ಸುರಿದು ಬರ್ಬರವಾಗಿ ಕೊಲೆ ಮಾಡಿರುವುದನ್ನು ದಲಿತ ಫೌಂಡೇಷನ್, ಜೀವಿಕಾ ಸಂಘಟನೆ, ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿವೆ. ಪ್ರೀತಿಸಿ ಮದುವೆಯಾದ ಎರಡು ವರ್ಷದಲ್ಲೇ ಕಿರುಕುಳ ನೀಡಿ ಕೊಲೆ ಮಾಡಿರುವ ಆರೋಪಿಗೆ ಕಾನೂನು ರೀತಿಯಾಗಿ ತಕ್ಕ ಶಿಕ್ಷೆ ನೀಡಬೇಕು ಎಂದು ದಲಿತ ಸಂಘಟನೆಯ ನಾಗರತ್ನಮ್ಮ, ಚಿಕ್ಕಮ್ಮ, ಡಿ.ಟಿ.ಸಂಜೀವಮೂರ್ತಿ, ಆರ್.ಕೃಷ್ಣಪ್ಪ, ತಿಮ್ಮಯ್ಯ ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.