ADVERTISEMENT

ರಂಜಿಸಿದ ಯುವಜನ ಮೇಳ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:55 IST
Last Updated 7 ಫೆಬ್ರುವರಿ 2011, 9:55 IST

ಶಿಡ್ಲಘಟ್ಟ: ಜನಪದ ಗೀತೆಗಳು, ಗೀಗೀ ಪದಗಳು, ತಮಟೆ ಡೊಳ್ಳು ಮೊದಲಾದ ಚರ್ಮ ವಾದ್ಯಗಳ ಸಂಗೀತ, ಭಜನೆ, ಭಾವಗೀತೆ, ಜನಪದ ನೃತ್ಯಗಳು ಮೊದಲಾದ ಕಲಾ ಪ್ರಕಾರಗಳನ್ನು ಕಲಾವಿದರು  ಪಟ್ಟಣದಲ್ಲಿ ಶನಿವಾರ ಮತ್ತು ಭಾನುವಾರ ಪ್ರದರ್ಶಿಸಿ ಜನರನ್ನು ರಂಜಿಸಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 2010-11ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ವಿವಿಧ ತಾಲ್ಲೂಕಿನಿಂದ ಆಗಮಿಸಿದ್ದ ಕಲಾವಿದರು ನಾನಾ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.

ಜಿಲ್ಲಾ ಪಂಚಾಯತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ವರದನಾಯಕನಹಳ್ಳಿ ಈಧರೆ ಕಲೆ ಮತ್ತು ಸಾಂಸ್ಕೃತಿಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಯುವ ಜನ ಮೇಳದಲ್ಲಿ ಗಂಡಸರ ಮತ್ತು ಹೆಂಗಸರ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನು ನಡೆಸಲಾಯಿತು. ವೈಯಕ್ತಿಕ ಸ್ಪರ್ಧೆಗಳಾದ ಲಾವಣಿ, ಏಕಪಾತ್ರಾಭಿನಯ, ಭಾವಗೀತೆ ಹಾಗೂ ಗುಂಪು ಸ್ಪಧೆಗಳಾದ ಜನಪದ ಗೀತೆ, ಜನಪದ ನೃತ್ಯ, ಗೀಗೀಪದ, ಸೋಬಾನೆ ಪದ, ರಂಗಗೀತೆ, ಭಜನೆ, ಚರ್ಮವಾದ್ಯ, ಡೊಳ್ಳುಕುಣಿತ ನಡೆದವು.

ಚಿಕ್ಕಬಳ್ಳಾಪುರದ ಸ್ವಾಮಿ ವಿವೇಕಾನಂದ ಕಲಾ ಬಳಗ ಗೀಗೀಪದ, ಭಜನೆ, ಜನಪದ ಗೀತೆ, ಲಾವಣಿ ಹಾಗೂ ರಂಗಗೀತೆಗಳಲ್ಲಿ ವಿಜೇತರಾದರು. ಡೊಳ್ಳು, ಚರ್ಮವಾದ್ಯ, ಭಾವಗೀತೆ ಸ್ಪರ್ಧೆಗಳಲ್ಲಿ ವರದನಾಯಕನಹಳ್ಳಿಯ ಈಧರೆ ಕಲಾ ಬಳಗ ಬಹುಮಾನ ಪಡೆದರು. ಗೌರೀಬಿದನೂರಿನ ಜೀವಜಲ ಯುವತಿ ಮಂಡಳಿ ಜನಪದಗೀತೆ, ಗೀಗೀಪದ ಸ್ಪರ್ಧೆಯಲ್ಲಿ ವಿಜೇತರಾದರು. ಬಾಗೇಪಲ್ಲಿಯ ಲಂಬಾಣಿ ಕಲಾ ತಂಡ ಜಾನಪದ ನೃತ್ಯದಲ್ಲಿ ಬಹುಮಾನ ಪಡೆದರು.

ತೀರ್ಪುಗಾರರಾಗಿ ನಾರಾಯಣ ಕುಲಕರ್ಣಿ, ತಾರಾ ರಾಜಗೋಪಾಲ್, ವೆಂಕಟರಾಮ್, ಶ್ರೀಲಕ್ಷ್ಮಿ, ಸಂಜೀವಪ್ಪ ಆಗಮಿಸಿದ್ದರು. ಕಾರ್ಯಕ್ರಮದ ಸಂಚಾಲಕ ತಿರುಮಲ ಪ್ರಕಾಶ್, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಚಂದ್ರ, ಮಧು, ಪ್ರಭಾಕರ, ಗಂಗರಾಜು, ಶೇಖರ್, ಅಭಿಲಾಷ್, ಸುಪ್ರೀತ್, ಮಂಜುನಾಥ್, ತಿರುಮಲೇಶ್, ಮುನಿರಾಜು, ಮುದ್ದುಮಲ್ಲ, ಆಂಜಿನಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.