ADVERTISEMENT

ರಸ್ತೆ ಮಧ್ಯೆ ಸ್ವಾಗತ ಫಲಕ: ಸಂಚಾರ ನರಕ

ತಿಪಟೂರು ನಗರಸಭೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2014, 5:44 IST
Last Updated 21 ಮೇ 2014, 5:44 IST
ತಿಪಟೂರು ಕೆ.ಆರ್.ಬಡಾವಣೆ ಸೇವಾ ರಸ್ತೆ ಮಧ್ಯದಲ್ಲೇ ಹಾಕಿರುವ ಮದುವೆ ಸ್ವಾಗತ ಕಮಾನಿನಿಂದ ಉಂಟಾದ ಸಂಚಾರ ತೊಡಕಿನ ದೃಶ್ಯ.
ತಿಪಟೂರು ಕೆ.ಆರ್.ಬಡಾವಣೆ ಸೇವಾ ರಸ್ತೆ ಮಧ್ಯದಲ್ಲೇ ಹಾಕಿರುವ ಮದುವೆ ಸ್ವಾಗತ ಕಮಾನಿನಿಂದ ಉಂಟಾದ ಸಂಚಾರ ತೊಡಕಿನ ದೃಶ್ಯ.   

ತಿಪಟೂರು: ನಗರದ ಕೆಲ ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಗಳ ವಿಜೃಂಭಣೆ ಪ್ರದರ್ಶಿಸಲು ರಸ್ತೆ ಮಧ್ಯೆಯೇ ಸ್ವಾಗತ ಫಲಕ, ಕಮಾನು ರಾರಾಜಿಸುತ್ತಿರುತ್ತವೆ. ನಿರ್ಬಂಧ ಹೇರುವ ನಿರ್ಣಯ ಕೈಗೊಂಡಿದ್ದ ನಗರಸಭೆ ಮಾತ್ರ ಕುರುಡಾಗಿ ಕುಳಿತಿದೆ.

ಕಲ್ಯಾಣ ಮಂಟಪಗಳ ಒಳಗೆ ನಡೆಯುವ ಮದುವೆಯ ಅದ್ಧೂರಿ­ಯನ್ನು ದಾರಿಯಲ್ಲಿ ಪ್ರದರ್ಶಿಸುವ ಪರಿಪಾಠ ಹೆಚ್ಚಾ­ಗಿದೆ. ಮದುವೆ ನೆಪದಲ್ಲಿ ಶ್ರೀಮಂತಿಕೆ, ಪ್ರತಿಷ್ಠೆ ಪ್ರದರ್ಶಿ­ಸಲು ಸಾರ್ವಜನಿಕ ಸ್ಥಳ, ರಸ್ತೆಯನ್ನು ಎಗ್ಗಿಲ್ಲದೆ ಬಳಸಿಕೊಳ್ಳ­ಲಾಗು­ತ್ತಿದೆ. ನಗರದ ಕೆಲ ಪ್ರತಿಷ್ಠಿತ ಕಲ್ಯಾಣ ಮಂಟಪಗಳಲ್ಲಿ ನಡೆ­ಯುವ ಮದುವೆಗಳ ಅದ್ದೂರಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದರೂ ಸಂಬಂಧಿಸಿದವರು ಮಾತ್ರ ಗಮನ ಹರಿಸಿಲ್ಲ.

ಮುಖ್ಯವಾಗಿ ಕೆ.ಆರ್. ಬಡಾವಣೆಯಲ್ಲಿರುವ ಗುರುಕುಲ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಗಳ ಸ್ವಾಗತ ಮತ್ತು ವಧು–ವರರ ಹೆಸರುಳ್ಳ ನಾಮಫಲಕಗಳು ಸದಾ ರಸ್ತೆಯನ್ನೇ ಆಕ್ರಮಿಸಿಕೊಂಡಿರುತ್ತವೆ. ರಾಷ್ಟ್ರೀಯ ಹೆದ್ದಾರಿ­ಯಿಂದ ಸೇವಾ ರಸ್ತೆ ದಾಟಿ ಸಾಗುವ ಈ ಕಲ್ಯಾಣ ಮಂಟಪದ ದಾರಿ ಸಾರ್ವಜನಿಕರಿಗೆ ಸೇರಿದ್ದೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಮದುವೆ ಅಲಂಕಾರಕ್ಕೆ ಬಳಕೆಯಾಗುತ್ತಿದೆ.

ಇಷ್ಟೇ ಅಲ್ಲದೆ ಹೆದ್ದಾರಿಯಿಂದ ಕಲ್ಯಾಣ ಮಂಟಪದ ಕಡೆ ತಿರುವು ಪಡೆದುಕೊಳ್ಳುವ ಸ್ಥಳದ ಸೇವಾ ರಸ್ತೆಯ ಮಧ್ಯದಲ್ಲೇ ಸ್ವಾಗತ ಫಲಕಗಳನ್ನು ಹಾಕಲಾಗುತ್ತಿದೆ. ಸಾರ್ವಜನಿಕ ಕ್ಷೇತ್ರದಲ್ಲಿರುವ ಜವಾಬ್ದಾರಿ ವ್ಯಕ್ತಿಗಳೂ ತಮ್ಮ ಶ್ರೀಮಂತಿಕೆ ಪ್ರದರ್ಶಿಸಲು ಈ ರಸ್ತೆಗಳನ್ನು ಮುಜುಗರವಿಲ್ಲದೆ ಬಳಸಿ­ಕೊಂಡಿದ್ದಾರೆ.

ನಗರದಲ್ಲಿ ಹಿರಿತನವಿರುವ ಕೆ.ಆರ್.ಬಡಾವಣೆಯಲ್ಲಿ 50 ವರ್ಷಗಳ ಹಿಂದೆಯೇ ಮುಖ್ಯ ರಸ್ತೆ ಪಕ್ಕ ಸೇವಾ ರಸ್ತೆಯನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ. ಆದರೆ ಈಗ ಆ ಸೇವಾ ರಸ್ತೆ ಮದುವೆ ಕಮಾನುಗಳನ್ನು ಹೊತ್ತು ನಿಲ್ಲುವ ಸ್ಥಳವಾಗಿದೆ.
ಮದುವೆ ಸಂದರ್ಭಗಳಲ್ಲಿ ಸಂಚಾರ ನಿರ್ಬಂಧಿಸಿರುವ ಮಟ್ಟಿಗೆ ಸೇವಾ ರಸ್ತೆ ಮತ್ತು ಬಡಾವಣೆಯ ಮುಖ್ಯರಸ್ತೆಯನ್ನು ಆಕ್ರಮಿಸಿಕೊಳ್ಳಲಾಗುತ್ತದೆ. ಬೋರ್ಡ್, ಲೈಟ್, ಅಲಂಕಾರಿಕ ಪಕ್ಕ ಪರದೆಗಳನ್ನು ಹಾಕಿ ನಾಗರಿಕರು ಆ ರಸ್ತೆಯಲ್ಲಿ ಓಡಾಡಲು ಹಿಂಜರಿಯುವಂತೆ ಮಾಡಲಾಗುತ್ತದೆ. ವಾಹನ­ಗಳಂತೂ ಅತ್ತ ತಲೆ ಹಾಕುವಂತೆಯೇ ಇಲ್ಲ. ಹಾಗೊಮ್ಮೆ ಬಂದರೂ ಇಕ್ಕಟ್ಟಿನಿಂದ ಪಾರಾಗಲು ಕಷ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದೇ ಬಡಾವಣೆಯಲ್ಲಿರುವ ಮತ್ತೊಂದು ಕಲ್ಯಾಣ ಮಂಟಪದ ದಾರಿಯಲ್ಲೂ ಇದೇ ಪರಿಸ್ಥಿತಿ ಎದುರಾಗುತ್ತಿರು­ತ್ತದೆ. ಆಗಾಗ್ಗೆ ಇಷ್ಟೆಲ್ಲಾ ತಾಪತ್ರಯ ಆಗುತ್ತಿದ್ದರಿಂದ ಹಿಂದಿನ ನಗರಸಭೆ ಆಡಳಿತ ರಸ್ತೆಯಲ್ಲಿ ಸ್ವಾಗತ ಫಲಕ ಹಾಕುವುದನ್ನು ನಿಷೇಧಿಸಿ ನಿರ್ಣಯ ಕೈಗೊಂಡಿತ್ತು. ಹಾಗೊಮ್ಮೆ ಹಾಕಿದರೆ ಕಿತ್ತೆಸೆದು ದಂಡ ಹಾಕಲು ತೀರ್ಮಾನ ಕೈಗೊಳ್ಳಲಾಗಿತ್ತು. ಕೆಲ ತಿಂಗಳು ಈ ನಿಯಮ ಜಾರಿಯಲ್ಲೂ ಇತ್ತು.
ಹಾಕಿದ್ದ ಫಲಕಗಳನ್ನು ನಗರಸಭೆ ಸಿಬ್ಬಂದಿ ಕಿತ್ತು ಹಾಕಿದ್ದ ನಿದರ್ಶನಗಳೂ ಇದ್ದವು. ಆದರೆ ಒಂದು ವರ್ಷದಿಂದ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸಾರ್ವಜನಿಕ ರಸ್ತೆ ಶ್ರೀಮಂತಿಕೆ ಪ್ರದರ್ಶನಕ್ಕೆ ಬಳಕೆಯಾಗುತ್ತಿದೆ. ರೈಲ್ವೆ ನಿಲ್ದಾಣ ರಸ್ತೆ, ಕಾರೋನೇಷನ್ ರಸ್ತೆ ಸೇರಿದಂತೆ ಕೆಲವೆಡೆ ಇರುವ ಕಲ್ಯಾಣ ಮಂಟಪಗಳ ಬಳಿ ವಾಹನ ನಿಲುಗಡೆ ಸಂಚಾ­ರಕ್ಕೆ ತೊಡಕಾಗುತ್ತಿರುತ್ತದೆ. ನಿಯಮ ಪಾಲಿಸಲು ಎಚ್ಚರಿಸ­ಬೇಕಾದ ಅಧಿಕಾರಿಗಳು ಸುಮ್ಮನಿದ್ದಾರೆ. ಸಾರ್ವಜನಿಕರು `ಇಲ್ಲಿ ಆಡಳಿತ ಇಲ್ಲವೇ’ ಎಂದು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.