ADVERTISEMENT

ರಾಜಕಾಲುವೆ ಒತ್ತುವರಿ ತೆರವಿಗೆ ಒತ್ತಾಯ

ಗಾರ್ಡನ್ ರಸ್ತೆ ನೊಂದ ರೈತ, ನಾಗರಿಕ ಹೋರಾಟ ಸಮಿತಿ, ಸಿಪಿಎಂನಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 8:50 IST
Last Updated 19 ಜೂನ್ 2018, 8:50 IST
ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಬಂದ ಗಾರ್ಡನ್ ರಸ್ತೆ ನೊಂದ ರೈತ ಮತ್ತು ನಾಗರಿಕ ಹೋರಾಟ ಸಮಿತಿ ಸದಸ್ಯರು
ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಬಂದ ಗಾರ್ಡನ್ ರಸ್ತೆ ನೊಂದ ರೈತ ಮತ್ತು ನಾಗರಿಕ ಹೋರಾಟ ಸಮಿತಿ ಸದಸ್ಯರು   

ತುಮಕೂರು: ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ಅರ್ಧಕ್ಕೆ ನಿಂತಿರುವ ರಾಜಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಎಂ (ಭಾರತ ಕಮ್ಯುನಿಸ್ಟ್‌ ಪಕ್ಷ– ಮಾರ್ಕ್ಸ್‌ವಾದಿ) ಮತ್ತು ಗಾರ್ಡನ್ ರಸ್ತೆಯ ನೊಂದ ರೈತ– ನಾಗರಿಕ ಹೋರಾಟ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತುಮಕೂರು ಅಮಾನಿಕೆರೆಯಿಂದ ಪ್ರಾರಂಭವಾಗುವ ರಾಜಗಾಲುವೆಯು ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ ಅರ್ಧಕ್ಕೆ ನಿಂತು ಬಹಳ ವರ್ಷಗಳೇ ಆಗಿವೆ. ಸ್ಥಳೀಯ ಆಡಳಿತ ನಿರ್ಲಕ್ಷ್ಯದಿಂದ ಈ ಭಾಗದಲ್ಲಿ ವಾಸ ಮಾಡುವ ಜನರು ಮಳೆ ಬಂದಾಗ ನರಕಯಾತನೆ ಅನುಭವಿಸುವಂತಾಗಿದೆ ಎಂದು ಅವರು ಅಳಲುತೋಡಿಕೊಂಡರು.

ಈಚೆಗೆ ಮಳೆ ಸುರಿದಾಗ ಊರಿನ ಕಸಕಡ್ಡಿ, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳು ಪಕ್ಕದ ಹೊಲ,ಗದ್ದೆಗಳಲ್ಲಿ ಬಿದ್ದಿವೆ. ಇದರಿಂದ ಸಾಕಷ್ಟು ದುರ್ವಾಸನೆ ಹರಡಿದೆ. ಮಹಾನಗರ ಪಾಲಿಕೆಗೆ ಈ ಸಮಸ್ಯೆ ಹೋಗಲಾಡಿಸಿದರೂ ಈವರೆಗೂ ಸ್ಪಂದಿಸಿಲ್ಲ ಎಂದು ಅವರು ದೂರಿದರು.

ADVERTISEMENT

ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಅರ್ಧಕ್ಕೆ ನಿಂತಿರುವ ರಾಜಗಾಲುವೆಯು ಭೀಮಸಂದ್ರದ ಕೆರೆಗೆ ಅಳವಡಿಸಿರುವ ನೀರು ಶುದ್ಧೀಕರಣ ಘಟಕಕ್ಕೆ ಸಂಪರ್ಕ ಪಡೆಯುತ್ತದೆ. ಆದರೆ, ಇದು ಅರ್ಧಕ್ಕೆ ನಿಂತಿರುವುದರಿಂದ ಕೊಳಚೆ ನೀರು ಸರಿಯಾಗಿ ಹರಿಯುತ್ತಿಲ್ಲ. ರಸ್ತೆಗಳಲ್ಲಿಯೇ ಹರಿದು ಅನಾರೋಗ್ಯ ವಾತಾವರಣ ಸೃಷ್ಟಿಸಿದೆ ಎಂದು ಸಮಸ್ಯೆ ವಿವರಿಸಿವೆ.

ಸಿಪಿಎಂ ನಗರ ಸಮಿತಿ ಸದಸ್ಯ ಟಿ.ಎಚ್.ರಾಮು, ರಾಮಚಂದ್ರ, ಟಿ.ಎಚ್. ನಾಗರಾಜು, ಸುದರ್ಶನ್, ಮಂಜುನಾಥ್, ಬಸವರಾಜು, ಸುರೇಶ್, ರಂಗಣ್ಣ  ಮನವಿ ಸಲ್ಲಿಸಿದವರು.

ರಸ್ತೆಯಲ್ಲಿ ಸಂಚರಿಸುವುದೇ ಕಷ್ಟ

‘ಇಲ್ಲಿ ಇರುವ ಒಂದು ಚಿಕ್ಕ ರಸ್ತೆಯೂ ಸಹ ಮುಚ್ಚಿ ಹೋಗುತ್ತಿದ್ದು, ಸಂಚರಿಸುವುದೇ ಕಷ್ಟವಾಗುತ್ತಿದೆ. ಇದೇ ಪ್ರದೇಶದಲ್ಲಿ ಸ್ಮಶಾನವೂ ಕೊಳಚೆ ನೀರಿನಿಂದ ತುಂಬಿದೆ’ ಎಂದು ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ ಹೇಳಿದ್ದಾರೆ. ‘ಶನಿ ಮಹಾತ್ಮ ದೇವಸ್ಥಾನ, ಶ್ರೀರಾಮ ದೇವಸ್ಥಾನಗಳಿಗೆ ಬರುವ ಭಕ್ತರಿಗೂ ಸಂಚಾರಕ್ಕೆ ಕಷ್ಟವಾಗಿದೆ. ಕೂಡಲೇ ಈ ಸಮಸ್ಯೆ ಹೋಗಲಾಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.