ADVERTISEMENT

ರೈಲು ವೇಳೆ ಬದಲು ವಿರೋಧಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 6:30 IST
Last Updated 22 ಜೂನ್ 2012, 6:30 IST

ತಿಪಟೂರು: ಶಿವಮೊಗ್ಗ- ಬೆಂಗಳೂರು ಪ್ಯಾಸೆಂಜರ್ ರೈಲಿನ ಸಂಚಾರ ವೇಳೆ ಬದಲಿಸುವುದನ್ನು ವಿರೋಧಿಸಿ ಪ್ರಯಾಣಿಕರ ವೇದಿಕೆ ನೇತೃತ್ವದಲ್ಲಿ ಜೂ.24ರಂದು ಬೆಳಿಗ್ಗೆ ನಗರ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸುವುದಾಗಿ ರೈಲ್ವೆ ಸಲಹಾ ಸಮಿತಿ ಸದಸ್ಯ ಮಣಕೀಕೆರೆ ನಾಗರಾಜು ಗುರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂಜಾನೆ 4ಕ್ಕೆ ಶಿವಮೊಗ್ಗ ಬಿಟ್ಟು ಬೆಳಗ್ಗೆ 11ಕ್ಕೆ ಬೆಂಗಳೂರು ತಲುಪುತ್ತಿದ್ದ ಶಿವಮೊಗ್ಗ ಪ್ಯಾಸೆಂಜರ್ ರೈಲು ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ನೌಕರರಿಗೆ, ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಈ ರೈಲಿನ ಸಂಚಾರ ವೇಳೆಯನ್ನು ಜು.1ರಿಂದ ಬದಲಿಸುವುದಾಗಿ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಇದರ ಪ್ರಕಾರ ಬೆಳಗ್ಗೆ 8ಕ್ಕೆ ಶಿವಮೊಗ್ಗ ಬಿಡುವ ರೈಲು ಮಧ್ಯಾಹ್ನ 2ಕ್ಕೆ ಬೆಂಗಳೂರು ತಲುಪುತ್ತದೆ.

ಆ ಪ್ರಕಾರ ಅದು ಇಲ್ಲಿನ ನಿಲ್ದಾಣಕ್ಕೆ 11.30ಕ್ಕೆ ಬರುವುದರಿಂದ ಪ್ರಯೋಜನ ತಪ್ಪುತ್ತದೆ. ಆ ರೈಲನ್ನೇ ಅವಲಂಬಿಸಿದ್ದ ಕರಡಿ, ಅರಳಗುಪ್ಪೆ, ಬನಶಂಕರಿ ಮತ್ತಿತರ ಹಳ್ಳಿ ಸೇರಿದಂತೆ ಸಾವಿರಾರು ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮೊದಲಿನ ವೇಳೆಯಲ್ಲೇ ರೈಲು ಸಂಚಾರ ಮುಂದುವರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ರೈಲ್ವೆ ಸಲಹಾ ಸಮಿತಿ ಸದಸ್ಯನಾಗಿ ಈಗಾಗಲೇ ರೈಲ್ವೆ ಸಚಿವರು, ಸಂಸದರು ಮತ್ತು ರೈಲ್ವೆ ಇಲಾಖೆಗೆ ಪತ್ರ ಬರೆದು ವೇಳೆ ಬದಲಿಸದಂತೆ ಕೋರಿದ್ದೇನೆ. ಹುಬ್ಬಳ್ಳಿ ಕಚೇರಿಯ ಈ ನಿರ್ಧಾರದ ಬಗ್ಗೆ ತಮಗೇನು ಗೊತ್ತಿಲ್ಲವೆಂದು ಮೈಸೂರು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದರು.

ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಶಿವಪ್ಪ ಮಾತನಾಡಿ, ಈ ಹೋರಾಟದಲ್ಲಿ ಎಲ್ಲಾ ಸಂಘಸಂಸ್ಥೆಗಳು, ವರ್ತಕರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಈ ಪ್ರತಿಭಟನೆಗೆ ಬಗ್ಗದಿದ್ದರೆ ನಿರಂತರ ಹೋರಾಟ ಕೈಗೊಳ್ಳಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು. ಪ್ರಯಾಣಿಕರ ವೇದಿಕೆಯ ನಿರಂಜನ್, ಸಂಗಮೇಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.