ADVERTISEMENT

ವೈದ್ಯಕೀಯ ಅವ್ಯವಸ್ಥೆ: ಸದಸ್ಯರ ತರಾಟೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 8:45 IST
Last Updated 1 ಮಾರ್ಚ್ 2012, 8:45 IST

ಶಿರಾ: ತಾಲ್ಲೂಕಿನ ವೈದ್ಯಕೀಯ ಕ್ಷೇತ್ರದ ಅವ್ಯವಸ್ಥೆ ಬಗ್ಗೆ ವೈದ್ಯರನ್ನು ತಾಲ್ಲೂಕು ಪಂಚಾಯಿತಿ ಸದಸ್ಯರು ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ತಿಮ್ಮರಾಜು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಮೇಶ್ ಸೇರಿದಂತೆ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೊಗ್ಯ ಕೇಂದ್ರದ ಬಹುತೇಕ ವೈದ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡ ತಾ.ಪಂ.ಸದಸ್ಯರು ವೈದ್ಯಕೀಯ ಕ್ಷೇತ್ರದ ಅವ್ಯವಸ್ಥೆಯನ್ನು ವೈದ್ಯರಿಗೆ ಎಳೆಎಳೆಯಾಗಿ ಬಿಡಿಸಿಟ್ಟರು. ಬರಗೂರು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸದಸ್ಯೆ ಆರತಿ ಅಲ್ಲಿಯ ವೈದ್ಯ ಡಾ.ಅರಸ್ ಅವರನ್ನು ತೀವವಾಗಿ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆ ಸ್ವಚ್ಛತೆ ಸೇರಿದಂತೆ ಸಿಬ್ಬಂದಿ ದುರ್ವತನೆ ಬಗ್ಗೆ ದೂರಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ತಿಮ್ಮರಾಜು ಅಂಥ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ ಎಂದು ಸಮಾಜಾಯಿಷಿ ನೀಡಿದರು. ಅದಕ್ಕೆ ಮಾರುತ್ತರ ನೀಡಿದ ಸದಸ್ಯ ರಂಗನಾಥಪ್ಪ, ಅಲ್ರೀ ಅಂಥ ಎಷ್ಟು ನೋಟಿಸ್ ನೀಡುತ್ತೀರಿ? ಅವರು ಏನು ಉತ್ತರ ಕೊಟ್ಟಿದ್ದಾರೆ ಸಭೆಗೆ ತಿಳಿಸಿ. ಇಲ್ಲವೇ ಆತ ಉತ್ತರ ಕೊಡದಿದ್ದರೆ ಏನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನಾದರೂ ಹೇಳಿ. ಇಲ್ಲವೇ ತಾಲ್ಲೂಕು ವೈದ್ಯಾಧಿಕಾರಿಯೇ ಅಸಮರ್ಥರು ಎಂದು ಭಾವಿಸಬೇಕಾಗುತ್ತದೆ ಎಂದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುತ್ತಿರುವ ಊಟದ ಬಗ್ಗೆ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಮೇಶ್ ಅವರಿಂದ ಮಾಹಿತಿ ಪಡೆದ ಸದಸ್ಯ ನಾಗರಾಜು, ಒಬ್ಬರಿಗೆ ಒಂದು ಹೊತ್ತಿನ ಊಟಕ್ಕೆ ಸರ್ಕಾರ ರೂ.25 ಖರ್ಚು ಮಾಡಿದರೂ ಸಮರ್ಪಕವಾಗಿ ಊಟ ಪೂರೈಸುತ್ತಿಲ್ಲ ಎಂದು ದೂರಿದರು.

ಸಾರ್ವಜನಿಕ ಆಸ್ಪತ್ರೆ ವೈದ್ಯರು ಅಂಗವಿಕಲರಿಗೆ ಶೇ.80ರಷ್ಟು ಅಂಗವೈಕಲ್ಯದ ಪ್ರಮಾಣ ಪತ್ರ ನೀಡಲು 1 ಸಾವಿರ ಲಂಚ ನಿಗದಿ ಮಾಡಿದ್ದಾರೆ. ಹೀಗೆ ನನ್ನ ಕಣ್ಣಮುಂದೆಯೇ ಅಂಗವಿಕಲರು  ಸಾವಿರ  ಕೊಟ್ಟು ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಸದಸ್ಯ ವಿನಯ್ ತ್ಯಾಗರಾಜಪ್ಪ ಆರೋಪಿಸಿದರು.

ಆಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಮೇಶ್, ಅಂಗವಿಕಲರಿಂದ ಯಾವುದೇ ಹಣ ಪಡೆಯದೇ ಪ್ರಮಾಣ ಪತ್ರ ನೀಡುವಂತೆ ವೈದ್ಯರಿಗೆ ಪ್ರತಿ ಸಭೆಯಲ್ಲೂ ಸೂಚಿಸಲಾಗಿದೆ. ಅಲ್ಲದೆ ಅಂಗವಿಕಲರು ಶೇ.80ರಷ್ಟು ಅಂಗವೈಕಲ್ಯದ ಪ್ರಮಾಣಪತ್ರವನ್ನೇ ನೀಡುವಂತೆ ಪಟ್ಟುಹಿಡಿಯುವುದು, ಅಷ್ಟೊಂದು ಅಂಗವೈಕಲ್ಯ ಇಲ್ಲದಾಗ್ಯೂ ಶೇ.80ರಷ್ಟು ಅಂಗವೈಕಲ್ಯವೆಂದು ಪ್ರಮಾಣ ಪತ್ರ ನೀಡುವುದು ತಪ್ಪು ಎಂದು ಒಪ್ಪಿಕೊಂಡರು.

ಆಸ್ಪತ್ರೆ ಆಡಳಿತಾಧಿಕಾರಿಯಾಗಿರುವ ಡಾ.ರಮೇಶ್ ಅವರೇ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದನ್ನು ಸದಸ್ಯ ವಿನಯ್ ತ್ಯಾಗರಾಜಪ್ಪ ಉದಾಹರಣೆ ಸಹಿತ ತಿಳಿಸಿದಾಗ ಡಾ.ರಮೇಶ್ ಸರ್ಕಾರಿ ಸೇವೆ ಅವಧಿ ಮುಗಿದ ನಂತರ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಳ್ಳಬಹುದು ಎಂದು ಸಮರ್ಥಿಸಿಕೊಂಡರು.

ಬರದ ಹಿನ್ನೆಲೆಯಲ್ಲಿ ಬುಕ್ಕಾಪಟ್ಟಣ ಹೋಬಳಿಯಲ್ಲಿ ಗೋಶಾಲೆ ತೆರೆಯುವಂತೆ ಸದಸ್ಯ ರಂಗನಾಥಪ್ಪ ಒತ್ತಾಯಿಸಿದರು. ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆ ಕಾಡುತ್ತಿದ್ದು, ಈ ಬಗ್ಗೆ ತಾಲ್ಲೂಕಿನ ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ನಿರ್ಲಕ್ಷ್ಯದಿಂದ ವರ್ತಿಸುತ್ತಾರೆ ಎಂದು ಸದಸ್ಯ ಉದಯಶಂಕರ್ ದೂರಿದರು.
ಅಧ್ಯಕ್ಷ ಬಿ.ಎಸ್.ಸತ್ಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ  ಕೆಂಚಮ್ಮ, ಇಒ ಟಿ.ತಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.