ADVERTISEMENT

ಶಾಂತಿ ನೆಪದಲ್ಲಿ ಜನರ ಪ್ರಚೋದನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 9:07 IST
Last Updated 9 ಏಪ್ರಿಲ್ 2013, 9:07 IST

ತುಮಕೂರು: ರಾಜಕೀಯ ಕಾರಣಗಳಿಗಾಗಿ ಸಚಿವ ಎಸ್.ಶಿವಣ್ಣ ಅವರು ಶಾಂತಿ ಕಾಪಾಡುವ ಹೆಸರಿನಲ್ಲಿ ಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಶಫೀ ಅಹ್ಮದ್ ಹೇಳಿದರು.

ಬಾಬ್ರಿ ಮಸೀದಿ ಧ್ವಂಸದ ಕಾರಣಕ್ಕೆ ನಗರದಲ್ಲಿ 20 ವರ್ಷಗಳ ಹಿಂದೆ ಕೆಲವು ಅಹಿತಕರ ಘಟನೆಗಳು ನಡೆದವು. ಆದರೆ ಸಚಿವ ಶಿವಣ್ಣ ಅವರು `ತಾನು ಕಳ್ಳ ಪರರ ನಂಬ' ಎಂಬಂತೆ ವರ್ತಿಸುತ್ತಿದ್ದಾರೆ. ಎಲ್ಲವೂ ತನ್ನಿಂದಲೇ ಎಂದು ಹೇಳುತ್ತಿದ್ದಾರೆಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ಜನರನ್ನು ಪ್ರಚೋದನೆ ಮಾಡುವುದು ಸರಿಯಲ್ಲ. ಜನತೆ ಸಹಜವಾಗಿ ಶಾಂತಿಯಿಂದ ಇದ್ದಾರೆ. ನಗರದಲ್ಲಿ ತಾವು ಶಾಸಕರಾಗಿದ್ದ ಅವಧಿಯಲ್ಲಿ ಶಾಂತಿ ಕದಡುವ ಕೆಲಸ ನಡೆದಿಲ್ಲ. ಕೋಮುಸೌಹಾರ್ದ ಕಾಪಾಡುವಲ್ಲಿ ತಮ್ಮದೂ ಪಾತ್ರವಿದೆ ಎಂದರು.

ರಾಜಕೀಯ ನಿವೃತ್ತಿ: ತಾವು ಅಥವಾ ತಮ್ಮ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಎಲ್ಲಿಯಾದರೂ ಸರ್ಕಾರದ ಭೂಮಿ ಒತ್ತುವರಿ ಮಾಡಿಕೊಂಡಿರುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ. ಕೆಲವರು ತಮ್ಮ ವಿರುದ್ಧ ಆರೋಪ ಮಾಡುವುದಕ್ಕಾಗಿ ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಅಧಿಕಾರಿಯಿಂದ ಬೇಕಾದರೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ಈ ಚುನಾವಣೆಯ ಕೇಂದ್ರಬಿಂದು ನಗರದ ಕುಡಿಯುವ ನೀರು, ಒಳಚರಂಡಿ, ರಸ್ತೆ, ಕಸ ನಿರ್ವಹಣೆ ಸಮಸ್ಯೆಯಾಗಿದೆ.  ಕೇಂದ್ರದಿಂದ ಬರುವ ಎಲ್ಲ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲು ಆದ್ಯತೆ ನೀಡಲಾಗುವುದು. ಆಶ್ರಯ ನಿವೇಶನ ಮತ್ತು ಮನೆ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕ್ಷೇತ್ರದ ಅಭ್ಯರ್ಥಿ ಡಾ.ರಫಿಕ್‌ಅಹ್ಮದ್, ಗ್ರಾಮಾಂತರ ಅಭ್ಯರ್ಥಿ ಯಲಚವಾಡಿ ನಾಗರಾಜು, ಮುಖಂಡ ಮಂಜುನಾಥ್ ಮುಂತಾದವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.