ADVERTISEMENT

ಶಾಸಕರ ಆರೋಪ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:15 IST
Last Updated 2 ಅಕ್ಟೋಬರ್ 2012, 4:15 IST

ತಿಪಟೂರು: ಹೊನ್ನವಳ್ಳಿ ಏತ ನೀರಾವರಿ ಯೋಜನೆ ಬಾಕಿ ಕಾಮಗಾರಿಗೆ ಕೆಲವರು ಅಡ್ಡಗಾಲು ಹಾಕಿದ್ದಾರೆ ಎಂಬ ಸ್ಥಳೀಯ ಶಾಸಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಹಾಗೂ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎನ್.ಕಾಂತರಾಜು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಲ್ಲೂಕಿನ ಅಯ್ಯನಬಾವಿ ಸಮೀಪ ಸುತ್ತಮುತ್ತಲ ಗ್ರಾಮಸ್ಥರ ಜತೆ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆ.ಷಡಕ್ಷರಿ ಮಾತನಾಡಿ, ಮಡೇನೂರು ಸಮೀಪ ಏತ ನೀರಾವರಿ ಯೋಜನೆ ಪೈಪ್‌ಲೈನ್ ಕಾಮಗಾರಿಗೆ ಸಂಬಂಧಿಸಿ ರೈತರು ಕೆಲವೆಡೆ ನ್ಯಾಯಯುತ ಪ್ರಶ್ನೆ ಎತ್ತಿರುವುದಕ್ಕೆ ವಿರೋಧಿ ರಾಜಕೀಯ ಮುಖಂಡರ ಮೇಲೆ ಗೂಬೆ ಕೂರಿಸಲು ಶಾಸಕರು ಪ್ರಯತ್ನಿಸಿದ್ದಾರೆ. ಅವರ ಆರೋಪ ನಂಬಿ ಉಳಿದ ಭಾಗದ ಕೆಲ ರೈತರು ತಮ್ಮನ್ನು ಪ್ರಶ್ನಿಸಿದರು. ವಿಷಯವೇ ಗೊತ್ತಿಲ್ಲದ ತಾನು ಇದರಿಂದ ಬೇಸರಗೊಂಡು ವಿವರಣೆ ನೀಡಬೇಕಾಯಿತು.

ಭೂಸ್ವಾಧೀನ ಪ್ರಕ್ರಿಯೆಯನ್ನು ಸಕಾಲಕ್ಕೆ ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿಗೆ ತೊಡಕಾಗಿದೆ ಹೊರತು ರೈತರಿಂದಲೂ ಅಲ್ಲ. ಅದು ಶಾಸಕರಿಗೂ ಗೊತ್ತಿರುವ ವಿಚಾರ. ಯೋಜನೆಗೆ ಅಡ್ಡಗಾಲು ಹಾಕಲು ತಾವು ರೈತ ವಿರೋಧಿ ಅಲ್ಲ. ತಾವು ಶಾಸಕರಾಗಿದ್ದ ಅವಧಿಯಲ್ಲೇ ಈ ಯೋಜನೆಗೆ ಅನುಮೋದನೆ ದೊರಕಿತ್ತು ಎನ್ನುವುದು ಎಲ್ಲರಿಗೂ ತಿಳಿದಿದೆ.

ಕಾಮಗಾರಿ ಬಿರುಸಿನಿಂದ ನಡೆದು ಉದ್ದೇಶಿತ ಎಲ್ಲ ಕೆರೆಗಳಿಗೂ ಶೀಘ್ರದಲ್ಲಿ ನೀರು ಹರಿಯಲೆಂಬ ಆಸೆ ತಮಗೂ ಇದೆ. ಭೂಸ್ವಾಧೀನ ಮತ್ತು ಭೂ ಪರಿಹಾರಕ್ಕೆ ಸಂಬಂಧಿಸಿ ಹಠದ ಆಕ್ಷೇಪವೆತ್ತದೆ ಪೈಪ್‌ಲೈನ್ ಕಾಮಗಾರಿಗೆ ಅನುವು ಮಾಡಿಕೊಡಲು ರೈತರನ್ನು ಮಂಗಳವಾರ ಭೇಟಿ ನೀಡಿ ಕೋರಿದ್ದೇನೆ ಎಂದು ತಿಳಿಸಿದರು.

ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎನ್.ಕಾಂತರಾಜು ಮಾತನಾಡಿ, ಶಾಸಕರಿಂದ ದೂರವಾದ ತಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡರ ಮಾತು ಕೇಳಿ ಏತ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ.
 

ಕೆರೆಗಳಿಗೆ ನೀರು ಕಾಣುವ ಆಸೆಯಲ್ಲಿರುವ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದರೆ ಯೋಜನೆ ವಿಳಂಬ ಆಡಳಿತಾತ್ಮಕ ಲೋಪದ ಬಗ್ಗೆ ಆತ್ಮಾವಲೋಕ ಮಾಡಿಕೊಳ್ಳಲಿ ಎಂದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪರಮಶಿವಯ್ಯ, ತಿಮ್ಮೇಗೌಡ ಇತರರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT