ADVERTISEMENT

ಶಾಸಕರ ಆರೋಪ ಹುರುಳಿಲ್ಲದ್ದು

ಆಕ್ಷೇಪಕ್ಕೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚನ್ನಿಗಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 7:08 IST
Last Updated 30 ಮಾರ್ಚ್ 2018, 7:08 IST

ತುಮಕೂರು: ’ಮತದಾರರ ಪಟ್ಟಿಯಲ್ಲಿ ಇರುವ ನನ್ನ ಮತ್ತು ಕುಟುಂಬದವರ ಹೆಸರು ನಿಯಮಬದ್ಧವಾಗಿಯೇ ಇದ್ದು, ಶಾಸಕ ಬಿ.ಸುರೇಶ್‌ಗೌಡ ವಿನಾಕಾರಣ ಆರೋಪ ಮಾಡಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚನ್ನಿಗಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾವು ಸಜ್ಜನಿಕೆಯ ರಾಜಕಾರಣ ಮಾಡಿಕೊಂಡು ಬಂದವರು. ಕಾನೂನು ಮೀರಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಅನಿವಾರ್ಯತೆ ನಮಗೆ ಇಲ್ಲ. ಒಬ್ಬ ಮತದಾರ ಎಲ್ಲಿಯಾದರೂ ತನ್ನ ಹೆಸರು ನೋಂದಣಿ ಮಾಡಿಕೊಂಡು ಮತ ಚಲಾವಣೆ ಮಾಡಲು ಅವಕಾಶವಿದೆ. ಶಾಸಕರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಹೇಳಿದರು.

’ತಹಶೀಲ್ದಾರ್ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಇದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಬೇಗ ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಜಿಲ್ಲಾಧಿಕಾರಿ ಕಚೇರಿ ಕೊಠಡಿಗೆ ಬೀಗ ಹಾಕಲು ಹೋಗಿದ್ದು ದಬ್ಬಾಳಿಕೆಯ ತಂತ್ರವಾಗಿದೆ’ ಎಂದು ಟೀಕಿಸಿದರು.

ADVERTISEMENT

’ತುಮಕೂರು ಗ್ರಾಮಾಂತರದಲ್ಲಿ ನನ್ನ ಬಗ್ಗೆ, ನನ್ನ ಮಗ ಗೌರಿಶಂಕರ್ ಬಗ್ಗೆ ವಿನಾಕಾರಣ ಅವಹೇಳನಕಾರಿಯಾಗಿ ಶಾಸಕರು ಟೀಕಿಸುತ್ತಿದ್ದರೂ ಈವರೆಗೂ ಮಾತನಾಡಿರಲಿಲ್ಲ. ಈಗ ಚುನಾವಣೆ ಇರುವುದರಿಂದ ಶಾಸಕರ ಅತಿರೇಕದ ವರ್ತನೆಗೆ ಉತ್ತರಿಸಲೇಬೇಕಾಗಿದೆ’ ಎಂದು ಹೇಳಿದರು.

’ನಾನು ಶಾಸಕನಾಗಿ, ಸಚಿವನಾಗಿ, ಜನಾನುರಾಗಿಯಾಗಿ ಕೆಲಸ ಮಾಡಿದ್ದೇನೆ. ಆದರೆ, ಗ್ರಾಮಾಂತರ ಶಾಸಕರು ಬೇಜವಾಬ್ದಾರಿಯಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಚುನಾವಣೆ ಕಾರಣ ಇಟ್ಟುಕೊಂಡು ದರ್ಪ ಮೆರೆಯಬಾರದು. ಇದೇ ವರ್ತನೆ ಮುಂದುವರಿಸಿದರೆ ಉತ್ತರ ನೀಡಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.