ADVERTISEMENT

ಶಾಸಕ ಡಾ.ಜಿ.ಪರಮೇಶ್ವರ್ ಪ್ರವಾಸ: ಚರ್ಚೆಗೆ ಗ್ರಾಸ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 8:40 IST
Last Updated 24 ಫೆಬ್ರುವರಿ 2012, 8:40 IST

ತೋವಿನಕೆರೆ: ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ.ಪರಮೇಶ್ವರ್ ತೋವಿನಕೆರೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ಪ್ರವಾಸ ಪ್ರಾರಂಭಿಸಿದ್ದಾರೆ. ಆದರೆ ಕುಡಿಯುವ ನೀರು, ವಿದ್ಯುತ್, ರಸ್ತೆ ಮುಂತಾದ ಮೂಲಸೌಕರ್ಯ ಕಲ್ಪಿಸಲು ಪ್ರಯತ್ನಿ ಸದೆ ಗ್ರಾಮಗಳಿಗೆ ದಿಢೀರ್ ಭೇಟಿ ನೀಡುತ್ತಿರುವುದು ಗ್ರಾಮಸ್ಥರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಿ.ಎನ್.ದುರ್ಗ ಹಾಗೂ ಕೋರಾ ಹೋಬಳಿ ರಸ್ತೆ ಹದಗೆಟ್ಟು ಪ್ರಯಾಣಿಕರ ಸಾವಿಗೂ ಕಾರಣವಾಗಿದೆ. ತುಮಕೂರು- ತೋವಿನಕೆರೆ ಮಾರ್ಗದ ಸಿ.ಟಿ.ಕೆರೆ, ಕೆಸ್ತೂರು, ನೆಲಹಾಳ್ ರಸ್ತೆಗಳಲ್ಲಿ ಪ್ರಯಾಣಿಸುವುದು ದುಃಸ್ವಪ್ನ. ಅಲ್ಲದೆ ಇಲ್ಲಿನ ಗುತ್ತಿಗೆದಾರರೊಬ್ಬರು ಟೆಂಡರ್ ಕರೆಯುವ ಮುನ್ನವೇ ಸುಮಾರಾಗಿರುವ ರಸ್ತೆ, ಸೇತುವೆಗಳನ್ನು ಕಿತ್ತು ಹಾಕಿದ್ದು, ಟೆಂಡರ್ ಕರೆದು ಕೆಲಸ ಪ್ರಾರಂಭವಾಗುವರೆಗೂ ಪ್ರಯಾಣಿ ಕರು ಹದಗೆಟ್ಟ ರಸ್ತೆಯಲ್ಲಿಯೇ ಸಂಚರಿಸಬೇಕು.

ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಅಂತರ್ಜಲ ಕಡಿಮೆಯಾಗಿದ್ದು, ಹೆಚ್ಚಿನ ಕೊಳವೆ ಬಾವಿಯಲ್ಲಿ ನೀರು ನಿಂತಿದೆ. ಇದರಿಂದ ಕೃಷಿಯನ್ನೆ ನಂಬಿದ ಸಿ.ಎನ್.ದುರ್ಗ ಮತ್ತು ಕೋರಾ ಹೋಬಳಿ ರೈತರು ಸಂಕಷ್ಟದ ಸರಮಾಲೆ ಎದುರಿಸಬೇಕಾಗಿದೆ.

ಕೆರೆಗಳಿಗೆ ನೀರು ಒದಗಿಸುವ ಶಾಶ್ವತ ನೀರಾವರಿ ಯೋಜನೆ ರೂಪಿಸಿಬೇಕಾದ ಜವಾಬ್ದಾರಿ ಶಾಸಕ ಡಾ.ಜಿ.ಪರಮೇಶ್ವರ್ ಮೇಲಿದೆ ಎಂದು ರೈತ ಮುಖಂಡ ಗುಡಿಯಪ್ಪನವರ ಟಿ.ಡಿ.ರಂಗನಾಥ್ ಅಭಿಪ್ರಾಯಪಡುತ್ತಾರೆ.

ಕೆರೆಗಳು ತುಂಬಿ ಸುಮಾರು 20 ವರ್ಷ ಕಳೆದಿದೆ. 18 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಅನುಮೋದನೆ ಸಿಕ್ಕಿ ಆರು ವರ್ಷ ಕಳೆದರೂ ಪ್ರಗತಿ ಕಂಡಿಲ್ಲ. ಕಳೆದ ಮೂರು ವರ್ಷದಿಂದ ಅನೇಕ ಬಾರಿ ಒತ್ತಾಯಿಸಿದ್ದರೂ ಶಾಸಕರು ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶಾಸಕರಾಗಿ ಆಯ್ಕೆಯಾದ ನಂತರ ಹಳ್ಳಿಗಳಿಗೆ ಭೇಟಿ ನೀಡದ ಶಾಸಕರು ಈಗ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿರುವ ಬಗ್ಗೆ ಜನತೆ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಕ್ಷೇತ್ರಕ್ಕೆ ಮೂಲಸೌಕರ್ಯ ಮತ್ತು ನೀರಾವರಿ ಯೋಜನೆಗಳನ್ನು ತರುವಲ್ಲಿ ಶಿರಾ ಕ್ಷೇತ್ರ ವನ್ನು ನೋಡಬೇಕಾಗಿತ್ತು.
 
ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದು ಕಷ್ಟವಾಗಿರಲಿಲ್ಲ ಎಂದು ಇಲ್ಲಿನ ಜನತೆ ಹೇಳುತ್ತಿದ್ದಾರೆ.

ಹಿಂದಿನ ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಸಿದ್ದರಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿದ್ದರ ಬೆಟ್ಟವನ್ನು ಔಷಧಿ ವನವಾಗಿ ಅಭಿವೃದ್ಧಿಪಡಿಸಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದರು. ಇದರಿಂದ ರಾಜ್ಯದಲ್ಲೇ ವಿಶಿಷ್ಟವಾದ ಗೌರವ ಸ್ಥಾನ ಕ್ಷೇತ್ರಕ್ಕೆ ದೊರೆಯುತಿತ್ತು. ಆದರೆ ಶಾಸಕರು ಇದರ ಬಗ್ಗೆ ಗಮನ ಹರಿಸಿಲ್ಲ. ವರ್ಷ ಕಳೆದರೂ ಈ ಕೆಲಸ ಬಾಕಿ ಉಳಿದಿದೆ ಎಂದು ಸಾರ್ವಜನಿಕರು ಆಪಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.