ADVERTISEMENT

ಶಿರಾದಲ್ಲಿ ದೀಪಾವಳಿ ಸದ್ದು: ಹಳ್ಳಿಗಳು ದೀವಣಿಗೆಗೆ ಸಜ್ಜು!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 9:00 IST
Last Updated 27 ಅಕ್ಟೋಬರ್ 2011, 9:00 IST

ಶಿರಾ: ನಗರದಲ್ಲಿ ದೀಪಾವಳಿ ಪ್ರಯುಕ್ತ ಪಟಾಕಿಗಳ ಮಾರಾಟದ ಭರಾಟೆ, ಅವುಗಳ ಕಿವಿಗಡಚಿಕ್ಕುವ ಸದ್ದು, ದೀಪಗಳ ಅಲಂಕಾರ ಕಂಡು ಬರುತ್ತಿದ್ದರೆ, ತಾಲ್ಲೂಕಿನ ಹಳ್ಳಿಗಳಲ್ಲಿ ದೀಪಾವಳಿಗೆ ಬದಲು ದೀವಣಿಗೆ ಹಬ್ಬಕ್ಕೆ ಸಜ್ಜಾಗುತ್ತಿರುವುದು ಕಂಡುಬರುತ್ತಿದೆ.

ದೀಪಾವಳಿ ಹಬ್ಬದ ಆಚರಣೆ ಇಲ್ಲಿ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿದ್ದು, ಹಳ್ಳಿಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಅಷ್ಟಾಗಿ ಕಂಡುಬರುತ್ತಿಲ್ಲ. ಆದರೆ ದೀಪಾವಳಿಗೆ ಪರ್ಯಾಯವಾಗಿ ದೀವಣಿಗೆ ಹಬ್ಬದ ಆಚರಣೆ ತಯಾರಿ ನಡೆದಿದೆ.

ರೈತರು ವರ್ಷವಿಡಿ ಶ್ರಮಪಟ್ಟು ಮಾಡಿದ ಕೃಷಿ ಕೈಗೆ ಬರುವ ಸಂಭ್ರಮವಾಗಿ ದೀವಣಿಗೆ ಆಚರಿಸುತ್ತಾರೆ. ಬುಧವಾರ ಅಮಾವಾಸೆ ಮುಗಿದ ನಂತರ ಹಳ್ಳಿಗಳಲ್ಲಿ ದೀವಣಿಗೆ ಹಬ್ಬಗಳ ಸಾಲೇ ಶುರುವಾಗುತ್ತವೆ. ಅಂದರೆ ಎಲ್ಲ ಹಳ್ಳಿಗಳಲ್ಲೂ ಒಂದೇ ದಿನ ದೀವಣಿಗೆ ಆಚರಿಸದೆ ಆಯಾ ಹಳ್ಳಿಯ ಹಿರಿಯರ ತೀರ್ಮಾನದಂತೆ ಒಂದೊಂದು ದಿನ ಹಬ್ಬ ಆಚರಿಸುತ್ತಾರೆ.

ಹಬ್ಬಕ್ಕೆ ಮೂರು ದಿನ ಮುಂಚೆಯೇ ಗೊಲ್ಲ ಸಂಪ್ರದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಅಡವಿಯಲ್ಲಿ ಬೆಳೆದ ತಂಗಟೆ ಹೂವುಗಳನ್ನು ಗ್ರಾಮದ ಪ್ರತಿ ಮನೆಗಳ ಮುಂದೆ ಚೆಲ್ಲಿ ಹೋಗುತ್ತಾರೆ. ಹೀಗೆ ತಂಗಟೆ ಹೂವು ಚೆಲ್ಲಿದ ಮೂರು ದಿನಕ್ಕೆ ದೀವಣಿಗೆ ಹಬ್ಬ ಆಚರಣೆ ಮಾಡುವುದು ಸಂಪ್ರದಾಯ.

ಈ ದೀವಣಿಗೆ ಹಬ್ಬದ ವಿಶೇಷವೆಂದರೆ ದನಗಳಿಗೆ ಅಲಂಕಾರ ಮಾಡಿ ಅವುಗಳ ಮೆರವಣಿಗೆ ನಡೆಸಿ ಊರ ಹೊರಗಿನ ದೇವಸ್ಥಾನದ ಮುಂದೆ ಕಿಚ್ಚು ಹಾಯಿಸಲಾಗುತ್ತದೆ. ಬೆಳಗ್ಗೆಯೇ ದನಗಳ ಮೈ ತೊಳೆದು ಸಂಜೆ ಹೊತ್ತಿಗೆ ದನಗಳನ್ನು ವಿಶೇಷವಾಗಿ ಚೆಂಡು ಹೂವು, ಬಲೂನ್, ಹಾರ, ಟೇಪು ಹಾಗೂ ದನಗಳಿಗಾಗಿಯೇ ಸಿದ್ದಪಡಿಸಿದ ಬಟ್ಟೆಯ ಜೂಲಿನಿಂದ ಅಲಂಕರಿಸುತ್ತಾರೆ. ಹೀಗೆ ಅಲಂಕರಿಸಿದ ದನಗಳನ್ನು ಪ್ರತಿಯೊಬ್ಬರು ಮೆರವಣಿಗೆ ಮೂಲಕ ಗ್ರಾಮದ ಒಂದೆಡೆ ಕರೆತಂದು ಪಟಾಕಿ ಹೊಡೆಯುತ್ತಾರೆ.

ಈ ಪಟಾಕಿ ಸದ್ದಿಗೆ ದನಗಳು ಬೆದರುವಾಗ ಜನಗಳ ಕೇಕೆ ಉದ್ಘಾರ ಮುಗಿಲು ಮುಟ್ಟುತ್ತವೆ. ಕೆಲವರು ತಮ್ಮ ದನ ಅದರಲ್ಲಿಯೂ ಹೋರಿಗಳಿದ್ದರೆ ಅವುಗಳು ಹೆಚ್ಚು ಹೂಂಕರಿಸಿ ಹುಡ್ರಿಕೆ ಹೊಡೆಯಲೆಂದೇ ವಿಶೇಷವಾಗಿ ಮೇಯಿಸುವ ಜೊತೆಗೆ ಅಂಥ ಹೋರಿಗಳಿಗೆ ಮದ್ಯಪಾನ ಮಾಡಿಸುವರು ಇದ್ದಾರೆ.

ನಂತರ ಮೆರವಣಿಗೆ ಮೂಲಕ ಊರ ಹೊರಗಿನ ದೇವಸ್ಥಾನದ ಬಳಿಗೆ ದನಗಳ ಹಿಂಡು ಕರೆತಂದು ಅಲ್ಲಿ ಮೊದಲೇ ಮುಳ್ಳು, ತರಗೆಲೆ, ಸೌದೆಗಳಿಗಳಿಂದ ಪೇರಿಸಿದ್ದ ಬೃಹತ್ ಗುಡ್ಡೆಗೆ ಬೆಂಕಿ ಹಚ್ಚಿ ಕಿಚ್ಚುಹಾಯಿಸುವ ಮೂಲಕ ದೀವಣಿಗೆ ವಿದಾಯ ಹೇಳುತ್ತಾರೆ.

ಆದರೆ ಈಚೆಗೆ ಹಳ್ಳಿಗಳಲ್ಲಿ ದನಗಳೇ ಕಡಿಮೆಯಾಗಿವೆ. ಜೊತಗೆ ಬರದ ಛಾಯೆಯಿಂದ ಮೇವು ಇಲ್ಲದೆ ಇರುವ ಕೆಲ ದನಗಳು ಸೊರಗಿವೆ. ಹೀಗಾಗಿ ದೀವಣಿಗೆ ಹಬ್ಬದ ಮೇಲೆ ಬರದ ಕರಿ ನೆರಳು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT