ADVERTISEMENT

ಶಿವಕುಮಾರ ಸ್ವಾಮೀಜಿಗೆ 106ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 4:43 IST
Last Updated 2 ಏಪ್ರಿಲ್ 2013, 4:43 IST

ತುಮಕೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಸೋಮವಾರ 105 ವರ್ಷ ಪೂರೈಸಿ 106ನೇ ವಸಂತಕ್ಕೆ ಕಾಲಿಸಿರಿದರು.

106ರ ವಸಂತಕ್ಕೆ ಪಾದಾರ್ಪಣೆ ಮಾಡಿದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆಯಲು ಭಕ್ತರು, ಗಣ್ಯರ ದಂಡೇ ಮಠಕ್ಕೆ ಆಗಮಿಸಿತ್ತು. ಹುಟ್ಟುಹಬ್ಬದ ದಿನವೂ ಕಾಯಕ ಬಿಡದ ಸ್ವಾಮೀಜಿ ಎಂದಿನ ತಮ್ಮ ದಿನಚರಿ ಮುಂದುವರೆಸಿದರು.

ನಿತ್ಯದ ನಸುಕಿನ ಪೂಜೆ ಮುಗಿಸಿ ತಮ್ಮ ಪೂಜಾ ಕೋಣೆಯಿಂದ ಹೊರ ಬಂದ ಸ್ವಾಮೀಜಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮಠದ ಪ್ರಾರ್ಥನಾ ಆವರಣಕ್ಕೆ ಕರೆತರಲಾಯಿತು. ಎತ್ತರದ ವೇದಿಕೆ ಮೇಲೆ ಆಸೀನರಾದ ಸ್ವಾಮೀಜಿಗೆ ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಗಳ ಮಠಾಧೀಶರು, ಹರಗುರು ಚರಮೂರ್ತಿಗಳು ಪಾದಪೂಜೆ ನೆರವೇರಿಸಿದರು.

ಈ ಹೊತ್ತಿಗಾಗಲೇ ಅಪಾರ ಸಂಖ್ಯೆಯ ಭಕ್ತರು ಸ್ವಾಮೀಜಿ ಆಶೀರ್ವಾದ ಪಡೆಯಲು ಸರತಿ ಸಾಲಿನಲ್ಲಿ ಕಾದು ನಿಂತಿದ್ದರು. ತಮಗೆ ಶುಭ ಕೋರಲು ಬಂದ ಭಕ್ತ ಸಮೂಹದ ಕುಶಲ-ಕ್ಷೇಮವನ್ನು ಹಸನ್ಮುಖಿಯಾಗಿ ವಿಚಾರಿಸಿದ ಸ್ವಾಮೀಜಿ ಎಲ್ಲರನ್ನೂ ಹರಸಿದರು.

ಮುಂಜಾನೆಯಿಂದ ಆರಂಭವಾದ ಭಕ್ತರ ಭೇಟಿ ರಾತ್ರಿಯಾದರೂ ನಿಂತಿರಲಿಲ್ಲ. ಸಾಮಾನ್ಯ ಭಕ್ತರಲ್ಲದೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು. ತಮ್ಮ ಭೇಟಿಗಾಗಿ ಬಂದಿದ್ದ ಮಠದ ಹಳೆಯ ಭಕ್ತರು, ಹಿರಿಯರು, ಗಣ್ಯರನ್ನು ಮಾತನಾಡಿಸಿದರು. ಇದರ ನಡುವೆ ಎಂದಿನಂತೆ ತಮ್ಮ ದಿನಚರಿ ಕಾರ್ಯಗಳನ್ನು ನಡೆಸಿದರು.

ರಾತ್ರಿ ಮಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಸ್ವಾಮೀಜಿ ಉಭಯ ಕುಶಲೋಪರಿ ನಡೆಸಿದರು. ಸಮ ಪಾಲು, ಸಮ ಬಾಳು ತತ್ವದಡಿ ಸ್ವಾಮೀಜಿ ಜನ ಸೇವೆ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಯಡಿಯೂರಪ್ಪ ಅವರೊಂದಿಗೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕರಾದ ಎಚ್.ನಿಂಗಪ್ಪ, ಮಾಧುಸ್ವಾಮಿ, ಕೆಜೆಪಿ ಮುಖಂಡ ಜ್ಯೋತಿ ಗಣೇಶ್ ಇದ್ದರು. ಯಡಿಯೂರಪ್ಪ ಮಠದಲ್ಲೇ ಪ್ರಸಾದ ಸ್ವೀಕರಿಸಿ ತೆರಳಿದರು.

`ಸ್ವಾಮೀಜಿ 106ಕ್ಕೆ ಕಾಲಿಟ್ಟರೂ ಅವರಲ್ಲಿನ ನೆನಪಿನ ಶಕ್ತಿ, ಕೆಲಸ ಮಾಡುವ ರೀತಿ ವೈದ್ಯಕೀಯ ಯುಗಕ್ಕೆ ಅಚ್ಚರಿ. ಸ್ವಾಮೀಜಿ 106ಕ್ಕೆ ಕಾಲಿರಿಸಿದ್ದು ಸಂತಸ ತಂದಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು. ಈ ಸಮಯ ಸ್ವಾಮೀಜಿ ಜತೆ ಹತ್ತು ನಿಮಿಷ ಗುಪ್ತ ಸಮಾಲೋಚನೆ ನಡೆಸಿದರು.

ಭಕ್ತರ ಸಂಭ್ರಮ
ಸ್ವಾಮೀಜಿ 106ನೇ ವಸಂತಕ್ಕೆ ಕಾಲಿಡುವ ಅಪೂರ್ವ ಕ್ಷಣ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆ ಭಕ್ತರು ಭಾನುವಾರ ರಾತ್ರಿಯೇ ಮಠಕ್ಕೆ ಆಗಮಿಸಿದ್ದರು. ಮಠದ ಆವರಣದಲ್ಲೇ ಮಲಗಿದ್ದ ಭಕ್ತ ಸಮೂಹ ಮುಂಜಾನೆಯೇ ಸ್ನಾನ ಮುಗಿಸಿ ಸ್ವಾಮೀಜಿ ಜತೆ `ಲಿಂಗ ಪೂಜೆ' ನಡೆಸಿಕೊಳ್ಳಲು ಕಾತರದಿಂದ ಸರತಿಯಲ್ಲಿ ಕಾದರು. ಸ್ವಾಮೀಜಿ ಆಶೀರ್ವಾದ ಪಡೆದು ಸಂಭ್ರಮಿಸಿದರು.

ತಮ್ಮ ಜನ್ಮದಿನದ ಸಂದರ್ಭದಲ್ಲಿ ಸ್ವಾಮೀಜಿ ನೀಡುತ್ತಿದ್ದ ಆಶೀರ್ವಚನವನ್ನು ಈ ಬಾರಿ ನೀಡಲಿಲ್ಲ. ಮಠದ ಆವರಣದಲ್ಲಿ ನಡೆಯುತ್ತಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೊಂದರೆಯಾಗಬಾರದು ಎಂದು ಆಶೀರ್ವಚನ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.