ADVERTISEMENT

ಸಜ್ಜನರಿಗೆ ರಾಜಕೀಯ ಸಲ್ಲದು: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 8:45 IST
Last Updated 1 ಮಾರ್ಚ್ 2011, 8:45 IST

ಗುಬ್ಬಿ: ರಾಜಿ ಹಾಗೂ ಹೊಂದಾಣಿಕೆ ಗುಣ ಬೆಳೆಸಿಕೊಂಡ ಸಜ್ಜನ ರಾಜಕಾರಣಿಯ ಬೆಳೆವಣಿಗೆಗೆ ಇಂದಿನ ರಾಜಕೀಯ ವಿದ್ಯಮಾನ ಸಲ್ಲದು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಿಟ್ಟೂರಿನಲ್ಲಿ ಈಚೆಗೆ ಆಯೋಜಸಿದ್ದ ‘ಎಂ.ಪಿ.ಪ್ರಕಾಶ್ ನೆನಪು, ಗೀತ ನಮನ ಹಾಗೂ ನುಡಿ ನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಹುಮುಖ ಆಲೋಚನೆಯ ಎಂ.ಪಿ.ಪ್ರಕಾಶ್ ಸಾಮಾಜಿಕ ಸಮಾನತೆ ಚಿಂತಕರಾಗಿ ಜಾತ್ಯತೀತ ಗುಣದ ಸಂಭಾವಿತ ರಾಜಕಾರಣಿಯಾಗಿದ್ದರು ಎಂದರು.

ರಾಜ್ಯದ ಸಮಸ್ಯೆ ಮತ್ತು ಅಭಿವೃದ್ಧಿ ಪರಿಕಲ್ಪನೆ ಹೊಂದಿದ್ದ ಪ್ರಕಾಶ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರೆ ಜಾತಿ ಮತ್ತು ಹಣದ ರಾಜಕಾರಣಕ್ಕೆ ಆಸ್ಪದ ನೀಡುತ್ತಿರಲಿಲ್ಲ. ಅವರ ಸಾಮಾಜಿಕ ಕಾಳಜಿಗೆ ನಿದರ್ಶನವಾಗಿ ನಿರ್ಮಲ ಕರ್ನಾಟಕ ಯೋಜನೆಯಲ್ಲಿ ಪ್ರತಿ ಮನೆಗೆ ತಂದ ಶೌಚಾಲಯ ಇಂದು ನೈರ್ಮಲ್ಯ ಗ್ರಾಮಗಳ ಸೃಷ್ಟಿಗೆ ಮೂಲವಾಯಿತು.

ರಾಜಕೀಯದೊಂದಿಗೆ ಸಾಹಿತಿ ಹಾಗೂ ರಂಗಭೂಮಿ ಕಲಾವಿದರಾಗಿ ಪ್ರತಿಭೆ ಹೊರಹೊಮ್ಮಿದ ಅವರು ಸ್ವತಹ ಬರವಣಿಗೆಗಾರ ಹಾಗೂ ಓದುಗರಾಗಿದ್ದರು. ವಿದ್ಯಾರ್ಥಿಗಳ ಪಠ್ಯದಲ್ಲಿ ರಂಗಭೂಮಿ ವಿಷಯ ತರುವುದು ಅವರ ಕನಸಾಗಿತ್ತು ಎಂದರು.

ರಂಗಗೀತೆ ಮೂಲಕ ಗೀತ ನಮನ ನಡೆಸಿಕೊಟ್ಟ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್, ಮಕ್ಕಳಮನೆ-ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿದರು.

ಕಿರುತರೆ ನಟ ಹನುಮಂತೇಗೌಡ, ಬಿ.ಚಂದ್ರೇಗೌಡ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಬಿ.ವಿ.ರತ್ನಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಆರ್.ಬಿ.ಜಯಣ್ಣ, ಸಾಗರನಹಳ್ಳಿ ನಟರಾಜು, ಗುಬ್ಬಿ ಕಾಯರ್ಸ್‌ನ ಕಿಡಿಗಣ್ಣಪ್ಪ, ಕೆಪಿಸಿಸಿ ಸದಸ್ಯ ತಾತಯ್ಯ, ಮಕ್ಕಳಮನೆ-ಸಾಂಸ್ಕೃತಿಕ ಅಧ್ಯಯನ ಕೇಂದ್ರದ ರಾಘವೇಂದ್ರ, ಸ್ಥಳೀಯ ಮುಖಂಡರಾದ ಸುರೇಶ್, ಯೋಗೀಶ್, ಶಿವಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.