ADVERTISEMENT

ಸಮರ್ಥ ನಿರ್ದೇಶಕರ ನೇಮಕಕ್ಕೆ ಒತ್ತಾಯ

ತುಮಕೂರು ಗ್ರಾಮಾಂತರ ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 9:40 IST
Last Updated 20 ಡಿಸೆಂಬರ್ 2012, 9:40 IST

ತುಮಕೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಮರ್ಥ ನಿರ್ದೇಶಕರನ್ನು ನೇಮಿಸದ ಹೊರತು ರಾಜ್ಯದಲ್ಲಿ ಐಸಿಡಿಎಸ್ ಯೋಜನೆ ಸರಿ ದಾರಿಗೆ ಬರಲು ಸಾಧ್ಯವೇ ಇಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟದ (ಸಿಐಟಿಯು) ಅಧ್ಯಕ್ಷೆ ವರಲಕ್ಷ್ಮೀ ಹೇಳಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಮರ್ಥ ನಿರ್ದೇಶಕರು ಇಲ್ಲ. 6 ತಿಂಗಳಲ್ಲಿ ಮೂವರು ನಿರ್ದೇಶಕರನ್ನು ಸರ್ಕಾರ ಬದಲಿಸಿದೆ. ಇದರಿಂದ ಐಸಿಡಿಎಸ್ ಯೋಜನೆ ನೆನಗುದ್ದಿಗೆ ಬಿದ್ದಿದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳನ್ನು ಇಲಾಖೆಯ ನಿರ್ದೇಶಕರಾಗಿ ನೇಮಿಸುವ ಪರಿಪಾಠವನ್ನು ಸರ್ಕಾರ ಬೆಳೆಸಿಕೊಂಡಿದೆ. ಸೇವೆಯ ಅಂಚಿನಲ್ಲಿರುವ ಕಾರಣ ಈ ಅಧಿಕಾರಿಗಳು ಇಲಾಖೆಯ ಸುಧಾರಣೆಗೆ ಗಮನ ಹರಿಸುವುದಿಲ್ಲ ಎಂದು ಆರೋಪಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳು ಎಲ್ಲೂ ಹೊರಗೆ ಬರುತ್ತಿಲ್ಲ. ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳವನ್ನೂ ನೀಡುತ್ತಿಲ್ಲ. ಕೆಲಸ ಮಾಡಬೇಕಾದ ವಾತಾವರಣ ಕೂಡ ಇಲ್ಲ ಎಂದು ಹೇಳಿದರು.

ಇಲಾಖೆಗೆ ಬೇಕಾದ ಮೂಲ ಸೌಲಭ್ಯವನ್ನು ಮೊದಲು ಒದಗಿಸಬೇಕು. ಕೆಲಸ ಮಾಡುವ ಉತ್ತಮ ವಾತಾವರಣ ನಿರ್ಮಿಸಿದರೆ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಮಾಡುತ್ತಾರೆ. ಕೆಲಸದ ವಾತಾವರಣ ನಿರ್ಮಿಸದೆ ಎಲ್ಲಕ್ಕೂ ಕಾರ್ಯಕರ್ತೆಯರನ್ನೇ ಜವಾಬ್ದಾರಿಯನ್ನಾಗಿ ಮಾಡುವುದು ಸರಿ ಅಲ್ಲ ಎಂದರು.

ಸಮಾವೇಶದಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್ ಮುಜೀಬ್, ಮುಖಂಡರಾದ ಕಮಲಾ, ಗಂಗಾ, ಮಲ್ಲಮ್ಮ ಇತರರು ಇದ್ದರು.

ಮುಜೀಬ್ ಪುನರಾಯ್ಕೆ
ಕುಣಿಗಲ್‌ನಲ್ಲಿ ನಡೆದ ಸಿಐಟಿಯು ಜಿಲ್ಲಾ ಸಮಾವೇಶದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಯ್ಯದ್ ಮುಜೀಬ್ ಪುನರ್‌ಆಯ್ಕೆ ಆಗಿದ್ದಾರೆ.

ಉಪಾಧ್ಯಕ್ಷರಾಗಿ ಮಹಮದ್ ದಸ್ತಗೀರ್, ಮಧುಗಿರಿ ಎಸ್.ಡಿ.ಪಾರ್ವತಮ್ಮ, ಶಿರಾ ನಿಸಾರ್ ಅಹಮದ್, ಬಿ.ಉಮೇಶ್, ಕುಣಿಗಲ್ ಶಾಂತಕುಮಾರಿ, ಪಾವಗಡ ಸುಶೀಲಾ, ಕೊರಟಗೆರೆ ವಿಜಯಮ್ಮ, ಗುಲ್ಜಾರ್‌ಬಾನು, ತಿಪಟೂರು ಅನುಸೂಯ, ತುಮಕೂರು ಪುಟ್ಟೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಕೆ.ಸುಬ್ರಹ್ಮಣ್ಯ, ಕಾರ್ಯದರ್ಶಿಗಳಾಗಿ ಕೊರಟಗೆರೆ ನೌಶಾದ್‌ಸೆಹಗನ್, ತುಮಕೂರು ಷಣ್ಮುಖಪ್ಪ, ಕುಣಿಗಲ್ ಅಬ್ದುಲ್ ಮುನಾಫ್, ಪಾವಗಡ ಹನುಮಂತರಾಯಪ್ಪ, ಮಧುಗಿರಿ ಸಿ.ಮಲ್ಲಮ್ಮ, ದೇವರಾಜು, ಶ್ರೀಧರ್, ಕೆ.ಮಂಜುನಾಥ್, ರವಿ, ಖಜಾಂಚಿಯಾಗಿ ಜೆ.ಕಮಲಾ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.