ADVERTISEMENT

ಸಮಾಜ ಒಡೆಯಲು ಮುಂದಾಗದಿರಿ

ಬಸವೇಶ್ವರ ಜಯಂತ್ಯುತ್ಸವ ಮತ್ತು ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 9:14 IST
Last Updated 4 ಜೂನ್ 2018, 9:14 IST

ತುರುವೇಕೆರೆ: ಬಸವಣ್ಣನವರ ವಚನಗಳಿಂದ ಪ್ರೇರಿತರಾಗಿ ನಾವು ಒಂದೇ ಸೂರಿನಡಿ ಬದುಕಬೇಕು. ಆದರ್ಶ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗ ಬೇಕು. ಆದರೆ ಸಮಾಜ ಒಡೆಯುವ ದುಸ್ಸಾಹಸಕ್ಕೆ ಯಾರೂ ಕೈ ಹಾಕಬಾರದು ಎಂದು ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಕರಿವೃಷಭದೇಶಿಕೇಂದ್ರ ಸ್ವಾಮೀಜಿ ತಿಳಿ ಹೇಳಿದರು.

ಪಟ್ಟಣದ ಕೆರೆಕೋಡಿಯಲ್ಲಿರುವ ಸಿದ್ದರಾಮೇಶ್ವರ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಭಾನುವಾರ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತ್ಯುತ್ಸವ ಮತ್ತು ಅಭಿನಂದನಾ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ಅವರ ಶ್ರಮ ಸಂಸ್ಕೃತಿಯ ಆಶಯಗಳನ್ನು ಮರುಸೃಷ್ಟಿಸಬೇಕಾದ ಅನಿವಾರ್ಯತೆ ಇದೆ. ಸಮಾಜದ ಪ್ರತಿಯೊಬ್ಬರನ್ನೂ ತಾಯಿ, ತಂದೆ, ಅಣ್ಣ ತಮ್ಮ ಎಂಬ ಭಾವನೆಯಿಂದ ಕಂಡಾಗ ಸಮಾಜದಲ್ಲಿ ಹಾಲುಜೇನು ಕಾಣಲು ಸಾಧ್ಯ. ಕೆಚ್ಚೆದೆಯಿಂದ ದುಡಿದಾಗ ಎಲ್ಲರ ಬಾಳು ಬಂಗಾರವಾಗಲಿದೆ’ ಎಂದು ಹೇಳಿದರು.

ADVERTISEMENT

ತಮ್ಮಡಿಹಳ್ಳಿ ಮಠದ ಡಾ.ಮಲ್ಲಿ ಕಾರ್ಜುನ ಸ್ವಾಮೀಜಿ,  ‘ಕಾಯಕ’ ಎಂಬ ಹೊಸ ಪರಿಕಲ್ಪನೆಯನ್ನು ಪ್ರಪಂಚಕ್ಕೆ ಪರಿಚಯಿಸಿದವರು ಬಸವಣ್ಣ. ಗುಡಿ, ದೇವಸ್ಥಾನ, ಮತ್ತು ಚರ್ಚ್‌ಗಳಲ್ಲಿ ದೇವರನ್ನು ಕಾಣದೆ ಪರಿಶುದ್ಧ ಕೆಲಸದಲ್ಲಿ ಭಗವಂತನನ್ನು ಕಾಣಬಹುದು. ಅಂತರಂಗ ಬಹಿರಂಗಗಳ ಶುದ್ಧತೆ ಯಿಂದ ಆತ್ಮೊನ್ನತಿ ಗಳಿಸಬಹುದು’ ಎಂದು ನುಡಿದರು.

ತಾಲ್ಲೂಕಿನಲ್ಲಿ ಹೊಸ ಶಕ್ತಿ ತುಂಬುವ ಕೆಲಸವನ್ನು ಇಲ್ಲಿನ ಶಾಸಕರು ಮಾಡುತ್ತಿದ್ದಾರೆ. ಅಧಿಕಾರ ಮತ್ತು ಅಂಧಕಾರ ಹೋಗಿ ಜ್ಞಾನ ಜ್ಯೋತಿ ಮೊಳಗಲಿ ಎಂದು ಆಶಿಸಿದರು.

ಕೆರೆಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣ ಅವರ ವಚನಗಳಲ್ಲಿನ ತಾತ್ವಿಕತೆ ಮತ್ತು ವೈಚಾರಿಕತೆ ಎಲ್ಲರ ಬದುಕಿಗೆ ದಾರಿ ದೀವಿಗೆಯಾಗಬೇಕು. ಕಾಯಕ ಮತ್ತು ದಾಸೋಹದಿಂದ ಮಾತ್ರ ಸಮಾಜದ ಹಸಿವು ನೀಗಿಸಲು ಸಾಧ್ಯ ಎಂದರು.

ಶಾಸಕ ಎ.ಎಂ.ಜಯರಾಮ್ ಮಾತನಾಡಿ, ‘ನನ್ನ ಗೆಲುವು ಕ್ಷೇತದ್ರ ಜನಸಾಮಾನ್ಯರ ಹಗಲಿರುಳಿನ ಶ್ರಮದಿಂದ ದಕ್ಕಿದೆ’ ಎಂದು ಹೇಳಿದರು.

ಶಾಸಕ ಜೆಸಿ.ಮಾಧುಸ್ವಾಮಿ ಮಾತನಾಡಿದರು. ಶಾಸಕರಾದ ಎ.ಎಂ.ಜಯರಾಮ್, ಜೆ.ಸಿ.ಮಾಧುಸ್ವಾಮಿ, ಜ್ಯೋತಿ ಗಣೇಶ್ ಅವರನ್ನು ವೀರಶೈವ ಮಹಾಸಭಾದಿಂದ ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ಅಕ್ಕನ ಬಳಗದಿಂದ ವಚನಗಾಯನ ನಡೆಯಿತು.

ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರ ಸ್ವಾಮಿ, ಕಲ್ಲಬೋರನಹಳ್ಳಿ ಮಂಜಣ್ಣ, ಪದಾಧಿಕಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.