ADVERTISEMENT

ಸಾಮಾನ್ಯ ವರ್ಗಕ್ಕೂ ಮನೆಗಳ ನಿರ್ಮಾಣ

ಶಿರಾ: ಕೊಳೆಗೇರಿ ಅಭಿವೃದ್ಧಿ ಮಂಡಳಿ ಮನೆಗಳಿಗೆ ವಸತಿ ಸಚಿವ ಎಂ.ಕೃಷ್ಣಪ್ಪ ಅವರಿಂದ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 11:38 IST
Last Updated 2 ಜೂನ್ 2017, 11:38 IST
ಮನೆಗಳ ನಿರ್ಮಾಣಕ್ಕೆ ವಸತಿ ಸಚಿವ ಎಂ.ಕೃಷ್ಣಪ್ಪ ಶಂಕುಸ್ಥಾಪನೆ ನೆರವೇರಿಸಿದರು. ನಗರಸಭೆ ಸದಸ್ಯ ಅಬೀಬ್ ಖಾನ್, ಉಪಾಧ್ಯಕ್ಷೆ ಶೋಭಾ ಮಾರುತೇಶ್, ಅಧ್ಯಕ್ಷ ಅಮಾನುಲ್ಲಾ ಖಾನ್, ಸಚಿವ ಟಿ.ಬಿ.ಜಯಚಂದ್ರ, ಬಸವರಾಜು, ಶಾರದಾ ಶಿವಕುಮಾರ್ ಇದ್ದರು
ಮನೆಗಳ ನಿರ್ಮಾಣಕ್ಕೆ ವಸತಿ ಸಚಿವ ಎಂ.ಕೃಷ್ಣಪ್ಪ ಶಂಕುಸ್ಥಾಪನೆ ನೆರವೇರಿಸಿದರು. ನಗರಸಭೆ ಸದಸ್ಯ ಅಬೀಬ್ ಖಾನ್, ಉಪಾಧ್ಯಕ್ಷೆ ಶೋಭಾ ಮಾರುತೇಶ್, ಅಧ್ಯಕ್ಷ ಅಮಾನುಲ್ಲಾ ಖಾನ್, ಸಚಿವ ಟಿ.ಬಿ.ಜಯಚಂದ್ರ, ಬಸವರಾಜು, ಶಾರದಾ ಶಿವಕುಮಾರ್ ಇದ್ದರು   

ಶಿರಾ: ‘ರಾಜ್ಯದಲ್ಲಿ ಸಾಮಾನ್ಯ ವರ್ಗದ ವಸತಿ ರಹಿತರಿಗೆ ಅನುಕೂಲವಾಗುವಂತೆ ಈ ವರ್ಷ 5 ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ’ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಹೇಳಿದರು.

ನಗರದ ನಾರಾಯಣ ಸ್ವಾಮಿ ಕಲ್ಯಾಣ ಮಂಟಪದ ಅವರಣದಲ್ಲಿ ಗುರುವಾರ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ  ನಿರ್ಮಾಣ ಮಾಡುತ್ತಿರುವ ಮನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೇಳಿದ ತಕ್ಷಣ ಮನೆ ನೀಡಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ ₹4500 ಕೋಟಿ ಮೀಸಲಿರಿಸಲಾಗಿದೆ’ ಎಂದರು.

‘ಪ್ರತಿಯೊಬ್ಬರಿಗೂ ನಿವೇಶನ ದೊರಕಿಸಿಕೊಡಬೇಕು ಇದಕ್ಕಾಗಿ ಸರ್ಕಾರಿ ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಒಂದು ವೇಳೆ ಸರ್ಕಾರಿ ಜಾಗ ದೊರೆಯದಿದ್ದರೆ ಖಾಸಗಿ ಜಾಗ ಖರೀದಿ ಮಾಡಿ ನಿವೇಶನ ವಿತರಿಸಲಾಗುವುದು’ ಎಂದರು.

‘ಶಿರಾದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ 1008 ಮನೆಗಳ ನಿರ್ಮಾಣಕ್ಕಾಗಿ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಅಲ್ಲಿ ಅನುಮೋದನೆ ದೊರೆತ ತಕ್ಷಣ ಮನೆಗಳ ನಿರ್ಮಾಣದ ಕೆಲಸ ಪ್ರಾರಂಭಿಸಲಾಗುವುದು’ ಎಂದರು.

‘ಶಿರಾದಲ್ಲಿ ಶೇ 23 ರಷ್ಟು ಜನ ಕೊಳಚೆ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು ಎಲ್ಲರಿಗೂ ಮನೆ ನೀಡಲು ಸರ್ಕಾರ ಬದ್ಧವಾಗಿದೆ’ ಎಂದರು.

‘ರಾಜ್ಯದಲ್ಲಿ 3 ವರ್ಷದಿಂದ ಬರಗಾಲ ಇದ್ದರೂ , ಸಮರ್ಪಕವಾಗಿ ಬರ ನಿರ್ವಹಣೆ ಮಾಡಿದ ಕಾರಣ ಯಾರು ಸಹ ಹಸಿವಿನಿಂದ ನರಳದಂತಾಗಿದ್ದು. ಕರ್ನಾಟಕ ರಾಜ್ಯವನ್ನು ಹೊರತು ಪಡಿಸಿದರೆ ಎಲ್ಲೂ ಸಹ 7 ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನೀಡಿದ ಉದಾಹರಣೆ ಇಲ್ಲ’ ಎಂದರು.

ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ತಾಲ್ಲೂಕಿನಲ್ಲಿ ಪ್ರತಿಯೊಬ್ಬರಿಗೂ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ 950 ಎಕರೆ ಜಮೀನನ್ನು ಗುರುತಿಸಲಾಗಿದ್ದು ಇದರಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.

ಶಿರಾದಲ್ಲಿ ಪ್ರಧಾನ ಮಂತ್ರಿ ಅವಾಜ್ ಯೋಜನೆಯಲ್ಲಿ ನಿಗದಿಯಾಗಿರುವುದಕ್ಕಿಂತ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ವಸತಿ ಸಚಿವರಲ್ಲಿ ಮನವಿ ಮಾಡಿದರು. 

ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಉಪಾಧ್ಯಕ್ಷೆ ಶೋಭಾ ಮಾರುತೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜು, ಕೊಳಚೆ ಅಭಿವೃದ್ಧಿ ಮಂಡಳಿ ಅಯುಕ್ತ ಭೀಮಪ್ಪ, ತಹಶೀಲ್ದಾರ್ ಎಸ್.ಸಿ.ಹೊನ್ನಶ್ಯಾಮೇಗೌಡ, ನಗರಸಭೆ ಪೌರಾಯುಕ್ತ ಯೋಗಾನಂದ್, ಸಹಕಾರಿ ಧುರೀಣ ಎಸ್.ಎನ್.ಕೃಷ್ಣಯ್ಯ, ಸದಸ್ಯರಾದ ಜೀಷಾನ್ ಅಹಮದ್, ನಟರಾಜು, ಅಬೀಬ್ ಖಾನ್, ಅಬ್ದುಲ್ ಖಾದಿರ್, ನರಸಿಂಹಯ್ಯ, ಪ್ರಕಾಶ್ ಮುದ್ದರಾಜು, ಸಂತೋಷ್, ಶಾರದಾ ಶಿವಕುಮಾರ್ ಇದ್ದರು.

ಮನೆ ಎಲ್ಲಿ ಎಲ್ಲಿ
ಗಾಡಿವಾನ್ ಮೊಹಲ್ಲಾ 101 ಮನೆಗಳು, ನಾಗಜ್ಜಿಗುಡ್ಲು 71, ಜ್ಯೋತಿನಗರ 67, ಗುಡ್ಡದಹಟ್ಟಿ 125, ಕೊರಚರಹಟ್ಟಿ 86 ಸೇರಿದಂತೆ ಒಟ್ಟು 450 ಮನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT