ADVERTISEMENT

ಸಿಮೆಂಟ್ ರಸ್ತೆಗೆ ಹೆಗ್ಗಣಗಳ ಕನ್ನ; ಅವ್ಯವಸ್ಥೆ

ಪ್ರಜಾವಾಣಿ ವಿಶೇಷ
Published 11 ಜೂನ್ 2011, 7:20 IST
Last Updated 11 ಜೂನ್ 2011, 7:20 IST

ತುಮಕೂರು: ಚಿಕ್ಕಪೇಟೆಯ ಜನ ಒಂದು ರೀತಿಯಲ್ಲಿ ನಗರದ ಮೂಲನಿವಾಸಿಗಳು. ನಗರದ ಅತ್ಯಂತ ಹಳೆಯ ಬಡಾವಣೆ. ಇಲ್ಲಿನ ಜನಕ್ಕೆ ಅಭಿವೃದ್ಧಿಯ ಸಾಕಷ್ಟು ಸೌಲಭ್ಯಗಳು ದೊರೆಯಬೇಕಾಗಿತ್ತು. ಆದರೆ ಅಭಿವೃದ್ಧಿಗಾಗಿ ಇಲ್ಲಿ ಹುಡುಕಾಟ ನಡೆಸಬೇಕಾಗಿದೆ. ರಸ್ತೆಯಲ್ಲೆ ಹೆಗ್ಗಣಗಳ ರಾಜರೋಷ ನಡಿಗೆ ಇಲ್ಲಿ ಸಾಗಿದೆ.

ಈ ಬಡಾವಣೆ ಒಂದು ರೀತಿಯಲ್ಲಿ `ಮಿನಿ ಇಂಡಿಯಾ~ ಇದ್ದಂತೆ, ಇಲ್ಲಿ ಎಲ್ಲ ಸಮುದಾಯ, ಧರ್ಮದ ಜನರು ವಾಸವಿದ್ದಾರೆ. ಚಿಕ್ಕಪೇಟೆಗೆ ಮೂವರು ಪಾಲಿಕೆ ಸದಸ್ಯರು ಇದ್ದಾರೆ. ಮೂರು ಭಾಗಗಳಾಗಿ ಹಂಚಿ ಹೋಗಿದ್ದು ತರುಣೇಶ್, ಮೆಹಬೂಬ್ ಪಾಷಾ, ವಾಸುದೇವ ಪ್ರತಿನಿಧಿಸುತ್ತಾರೆ.

`ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಇಲ್ಲಿನ ಪ್ರಸಿದ್ಧಸ್ಥಳ. ಜನರ ಗಮನ ಸೆಳೆಯುವಂಥ ಅನೇಕ ದೇವಸ್ಥಾನಗಳು ಇಲ್ಲಿವೆ. ಸಾಕಷ್ಟು ಅಂಗಡಿ ಮಳಿಗೆಗಳೂ ಇವೆ. ದೇವಸ್ಥಾನ, ಅಂಗಡಿಗಳಿಗೆ ಬರುವ ಜನರಿಗೆ ಶೌಚ ಸಮಸ್ಯೆ ನೀಗಿಸಿಕೊಳ್ಳಲು ಎಲ್ಲಿ ಹುಡುಕಿದರೂ ಇಲ್ಲಿ ಶೌಚಾಲಯವೇ ಇಲ್ಲ. ನಿಜಕ್ಕೂ ಇದೊಂದು ಗಂಭೀರ ಸಮಸ್ಯೆ ಎನ್ನುತ್ತಾರೆ~ ಇಲ್ಲಿ ಪ್ರಿಟಿಂಗ್ ಪ್ರೆಸ್ ನಡೆಸುತ್ತಿರುವ ಕಾರ್ಮಿಕರ ಸಂಘದ ಮುಖಂಡ ಬಿ.ಉಮೇಶ್.

ಬಡಾವಣೆಯಲ್ಲಿ ಚರಂಡಿಗಳು ಅಲ್ಲಲ್ಲಿ ಕಟ್ಟಿಕೊಂಡಿರುವುದು ಕಣ್ಣಿಗೆ ರಾಚುತ್ತದೆ. ಹಳೆಯ ರಸ್ತೆಗಳನ್ನು ನವೀಕರಣ ಮಾಡುವ ಗೋಜಿಗೆ ಹೋಗಿಲ್ಲ. ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಸಿಮೆಂಟ್ ರಸ್ತೆಗಳ ನಿರ್ವಹಣೆಯೂ ಸರಿಯಾಗಿಲ್ಲ ಎಂಬ ದೂರು ಇಲ್ಲಿನ ಜನರದ್ದು.

ಮತ್ತೊಂದು ಅಚ್ಚರಿ ಎಂದರೆ ಇಲ್ಲಿನ ಕೆಲವು ರಸ್ತೆಗಳಲ್ಲಿ ಹಗಲಲ್ಲೆ ಹೆಗ್ಗಣಗಳ ನಡಿಗೆ ಸಾಗುತ್ತದೆ. ಸಿಮೆಂಟ್ ರಸ್ತೆಗಳಲ್ಲಿ ಬಿಲ ಕೊರೆದು ಆಚೀಚೆ ಓಡಾಡುವುದು ಸಾಮಾನ್ಯವಾಗಿದೆ.

ಇನ್ನು ಗಾರ್ಡನ್ ರಸ್ತೆಯಲ್ಲಿ ಹಳ್ಳ ಯಾವುದು, ರಸ್ತೆ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಕುಡಿಯುವ ನೀರಿನ ಹಳೆಯ ಕೊಳವೆ ಪೈಪುಗಳನ್ನು ಬಹಳಷ್ಟು ಕಡೆ ಬದಲಿಸುವ ಗೋಜಿಗೆ ಹೋಗಿಲ್ಲ. ಮಳೆ ಬಂದಾಗ ಚರಂಡಿಗಳು `ಹರಿಯುವ ನದಿ~ಗಳಾಗುತ್ತವೆ.

ನಗರದ ಕಾಲು ಭಾಗದಷ್ಟು ಶೌಚಾಲಯ, ಚರಂಡಿ ನೀರು ಕೋಡಿಬಸವಣ್ಣ ದೇವಸ್ಥಾನದ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂದೆ ಬಂದು ಸೇರುತ್ತದೆ. ಇಲ್ಲಿಂದ ಆಚೆಗೆ ಬೀಮಸಂದ್ರ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಹರಿದುಹೋಗಲು ಬೇಕಾದ ಕಾಲುವೆ ಈವರೆಗೂ ಆಗಿಲ್ಲ. ಹೀಗಾಗಿ ಕೊಳಚೆ ನೀರು ಇಲ್ಲಿನ  ಕೆರೆ, ಗದ್ದೆಗಳ ಮೇಲೆಯೇ ಹಾದು ಹೋಗುತ್ತಿದ್ದು ಹಲವು ರೋಗಳಿಗೆ ಕಾರಣವಾಗಿದೆ.

ಚಿಕ್ಕಪೇಟೆ ಸರ್ಕಲ್, ಅಗ್ರಹಾರದ ಮುಖ್ಯರಸ್ತೆ, ಹಳೆ ಪೊಲೀಸ್ ಠಾಣೆ ರಸ್ತೆ, ಆಚಾರ್ಯರ ಬೀದಿ, ಶಿಶುವಾರದ ಹಿಂಭಾಗ, ಗಾರ್ಡನ್ ರಸ್ತೆ, ಹರಿಸಿಂಗ್‌ರ ಬೀದಿ, ಕಾರಂಜಿ ಆಂಜನೇಯ ದೇವಸ್ಥಾನದ ಹಿಂದಿನ ರಸ್ತೆ, ಅಯ್ಯಪ್ಪಸ್ವಾಮಿ ದೇವಸ್ಥಾನದ ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆಗಳ ಪಾಡು ಕೂಡ ಕೇಳುವವರಿಲ್ಲವಾಗಿದೆ.
ಹಳೆ ಪೊಲೀಸ್ ಠಾಣೆ ರಸ್ತೆಯನ್ನು ಅಭಿವೃದ್ಧಿಪಡಿಸಲು ರೂ. 30 ಲಕ್ಷಕ್ಕೆ ಟೆಂಡರ್ ಕರೆದು ತಿಂಗಳುಗಳೇ ಕಳೆದರೂ ಗುತ್ತಿಗೆದಾರರು ಕಾಮಗಾರಿ ಆರಂಭಿಸದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಇನ್ನು ಒಳಚರಂಡಿ, ಕಾಂಕ್ರೀಟ್ ರಸ್ತೆಗಾಗಿ ಒಂದೂವರೆ ಕೋಟಿ ರೂಪಾಯಿ ವೆಚ್ಚದ ಕಾರ್ಯಾದೇಶ (ವರ್ಕ್ ಆರ್ಡರ್) ಕೂಡ ಆಗಿದೆ. ಆದರೆ ಕೆಲಸ ಮಾತ್ರ ಆರಂಭವಾಗುತ್ತಿಲ್ಲ.

`ಪಾಲಿಕೆಯಲ್ಲಿ ಭ್ರಷ್ಟಚಾರದ ಕುರಿತು ದ್ವನಿ ಎತ್ತುತ್ತಿರುವುದರಿಂದ ನಾನು ಪ್ರತಿನಿಧಿಸುವ ವಾರ್ಡ್‌ನ ಭಾಗಗಳ ಅಭಿವೃದ್ಧಿಯನ್ನು ತಡೆ ಹಿಡಿಯಲಾಗಿದೆ. ಆಚಾರ್ಯರ ಬೀದಿ ಅಭಿವೃದ್ಧಿಗಾಗಿ ವರ್ಕ್ ಆರ್ಡರ್ ಕೂಡ ಆಗಿದೆ. ಈವರೆಗೂ ಗುತ್ತಿಗೆದಾರರು ಯಾರೆಂಬುದೇ ಗೊತ್ತಿಲ್ಲ. ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಗಿ ಹೋಗಿದೆ. ನಾನು ಅನುದಾನ ತರಬಹುದು. ಆದರೆ ಕೆಲಸ ಮಾಡಿಸುವುದು ಅಧಿಕಾರಿಗಳ ಕೆಲಸ. ರಾಜಕೀಯ ಒತ್ತಡದಿಂದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ~ ಎಂದು ಪಾಲಿಕೆ ಸದಸ್ಯ ತರುಣೇಶ್ ದೂರುತ್ತಾರೆ.

ನಗರ ಸಾರಿಗೆ ಶಿರಾಗೇಟ್, ಗಾರ್ಡ್‌ನ ರಸ್ತೆ, ದಿಬ್ಬೂರು, ಬೆಳ್ಳಾವಿ ರಸ್ತೆ ಮೂಲಕ  ಹೆಗ್ಗರೆಗೆ ಸಂಚರಿಸಿದರೆ ಅನುಕೂಲವಾಗುತ್ತದೆ ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT