ADVERTISEMENT

ಸುಬ್ರಹ್ಮಣ್ಯೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 7:05 IST
Last Updated 16 ಜನವರಿ 2016, 7:05 IST
ಪಾವಗಡ ತಾಲ್ಲೂಕು ನಾಗಲಮಡಿಕೆಯಲ್ಲಿ ಶುಕ್ರವಾರ ವಲ್ಲಿ– ದೇವಸೇನಾ ಸಹಿತ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು.
ಪಾವಗಡ ತಾಲ್ಲೂಕು ನಾಗಲಮಡಿಕೆಯಲ್ಲಿ ಶುಕ್ರವಾರ ವಲ್ಲಿ– ದೇವಸೇನಾ ಸಹಿತ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು.   

ನಾಗಲಮಡಿಕೆ (ಪಾವಗಡ): ಗ್ರಾಮದ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ನಡೆಯಿತು. ಪ್ರತಿ ವರ್ಷದಂತೆ ಪುಷ್ಯ ಶುದ್ಧ ಷಷ್ಠಿಯಂದು ಮಧ್ಯಾಹ್ನ 12.30ಕ್ಕೆ ಮೇಷ ಲಗ್ನದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಬಾಳೆಹಣ್ಣು, ಹೂವು, ಧವನವನ್ನು ರಥ ಕಳಶಕ್ಕೆ ಅರ್ಪಿಸಿದರು.

₹ 14 ಲಕ್ಷ ವೆಚ್ಚದಲ್ಲಿ ನೂತನವಾಗಿ ರಥ ನಿರ್ಮಿಸಲಾಗಿತ್ತು. ಅದಕ್ಕೆ ಪ್ರತಿಷ್ಠಾಪನೆ ಪೂಜೆಗಳನ್ನು ನೆರವೇರಿಸಲಾಯಿತು. ಬೆಳಿಗ್ಗೆಯಿಂದಲೇ ಅಭಿಷೇಕ, ಏಕಾದಶಾ ರುಧ್ರಾಭಿಷೇಕ, ಪ್ರಾಕಾರೋತ್ಸವ ಇತ್ಯಾದಿ ಪೂಜೆಗಳು ನಡೆದವು. ರಥೋತ್ಸವದ ನಂತರ ನೈವೇದ್ಯಕ್ಕಾಗಿ ಸಿದ್ಧಪಡಿಸಿದ್ದ ಅನ್ನದ ರಾಶಿಯ ಮೇಲೆ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಮೂರ್ತಿಯನ್ನಿರಿಸಿ ಪೂಜಿಸಲಾಯಿತು. ವಿಶೇಷ ಪೂಜೆಯನ್ನು ನೋಡುವುದಕ್ಕಾಗಿಯೇ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.

ಮಡೆ ಸ್ನಾನ ನಡೆಯದಂತೆ ಪೊಲೀಸ್, ಕಂದಾಯ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದರು. ನೈವೇದ್ಯದ ನಂತರ ದೇಗುಲದ ಬಳಿಯ ಕೊಠಡಿಯಲ್ಲಿ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ನಡೆಯಿತು. ಎಲೆ, ಲೋಟ, ಎಂಜಲಿನೊಂದಿಗೆ ಹೊರ ಹೋಗದಂತೆ ಸೂಚನೆ ನೀಡಲಾಯಿತು.

ದೇಗುಲದ ಮುಂದಿನ ಅರಳೀಕಟ್ಟೆ, ಪ್ರಾಕಾರದ ನಾಗರ ಕಲ್ಲಿಗೆ ಭಕ್ತರು ಹಾಲು– ಹಣ್ಣು ಅರ್ಪಿಸಿದರು. ಬೆಂಗಳೂರು, ತುಮಕೂರು, ಬಳ್ಳಾರಿ, ಚಳ್ಳಕೆರೆ, ಚಿತ್ರದುರ್ಗ, ಆಂಧ್ರದ ಅನಂತಪುರ, ಕಡಪ ಮತ್ತಿತರೆಡೆಯಿಂದ ಭಕ್ತರು ಬಂದಿದ್ದರು.

ತುಮಕೂರು, ಚಳ್ಳಕೆರೆ, ಚಿತ್ರದುರ್ಗ ಮತ್ತಿತರ ಕಡೆ ವಿಶೇಷ ಬಸ್ ಸೌಕರ್ಯ ಇತ್ತು. ದನಗಳ ಜಾತ್ರೆಯಲ್ಲಿ ಎತ್ತು– ಹೋರಿಗಳ ಸಂಖ್ಯೆ ಕಡಿಮೆಯಿತ್ತು. ಪಶು ಇಲಾಖೆಯಿಂದ ಉತ್ತಮ ಎತ್ತು, ಹೋರಿಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.

ಹೋರಿಗಳ ವಿಭಾಗದಲ್ಲಿ ವದನಕಲ್ಲು ಗ್ರಾಮದ ತಿಪ್ಪೇಸ್ವಾಮಿ ಅವರ ರಾಸಿಗೆ ಪ್ರಥಮ, ಚಿತ್ತಗಾನಹಳ್ಳಿ ಗ್ರಾಮದ ಈರೇಗೌಡ ರಾಸಿಗೆ ದ್ವಿತೀಯ, ಹನುಮಸಾಗರದ ಚಿತ್ತಯ್ಯ ಅವರ ಹೋರಿಗಳಿಗೆ ತೃತೀಯ ಬಹುಮಾನ ವಿತರಿಸಲಾಯಿತು. 

ಎತ್ತುಗಳ ವಿಭಾಗದಲ್ಲಿ ಟಿ.ಎನ್.ಪೇಟೆ ಕೋದಂಡರಾಮಯ್ಯ, ಕುರುಬರಹಳ್ಳಿ ನಾಗಪ್ಪ, ಆಂಧ್ರದ ಕಂಬದೂರು ಗ್ರಾಮದ ಅಕ್ಕಲಪ್ಪ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಯಿತು. ಶಾಸಕ ಕೆ.ಎಂ. ತಿಮ್ಮರಾಯಪ್ಪ, ಉಪವಿಭಾಗಾಧಿಕಾರಿ ಅನಿತಾಲಕ್ಷ್ಮಿ, ತಹಶೀಲ್ದಾರ್ ವರದರಾಜು ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.