ADVERTISEMENT

ಸೌಹಾರ್ದ ಕೆಡಿಸಲು ಕಿಡಿಗೇಡಿಗಳ ಕರಪತ್ರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:32 IST
Last Updated 7 ಡಿಸೆಂಬರ್ 2012, 6:32 IST

ತಿಪಟೂರು: ಅಪಾರ ಜನಸ್ತೋಮ ನೆರೆಯುವ ತಿಪಟೂರು ಗಣೇಶೋತ್ಸವದ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆ ಕಿಡಿಗೇಡಿಗಳು ನಗರದ ಸೌಹಾರ್ದ ಕೆಡಿಸುವಂಥ ಕರಪತ್ರ ಮುದ್ರಿಸಿ ರಾತ್ರೋರಾತ್ರಿ ಬೀದಿಗಳಲ್ಲಿ ಎಸೆದು ಹೋಗಿರುವುದು ಆತಂಕ ಸೃಷ್ಟಿಸಿದೆ.

ಬೇನಾಮಿ ಸಮಿತಿಯೊಂದರ ಹೆಸರಲ್ಲಿ ಮುದ್ರಣಗೊಂಡಿರುವ ಕೋಮು ದ್ವೇಷ ಕಾರುವ ಕರಪತ್ರ ನಗರದ ಕೆಲವೆಡೆ ಮತ್ತು ತಾಲ್ಲೂಕಿನ ಗ್ರಾಮಾಂತರ ಪ್ರದೇಶಕ್ಕೆ ರಾತ್ರೋರಾತ್ರಿ ಬಂದು ಬಿದ್ದಿವೆ. ಆ ಕರಪತ್ರದಲ್ಲಿ ಒಂದು ಜನಾಂಗದ ವಿರುದ್ಧ ಇಲ್ಲಸಲ್ಲದ ಕಪೋಲಕಲ್ಪಿತ ಆರೋಪ ಮಾಡಲಾಗಿದೆ. ಆ ಜನಾಂಗದವರು ಸ್ಥಳೀಯ ಬಹುಸಂಖ್ಯಾತ ಧರ್ಮೀಯರ ಮೇಲೆ ಹಲವು ರೀತಿಯಲ್ಲಿ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದಾರೆ. ಗಣೇಶೋತ್ಸವ ಸಂದರ್ಭ ಅವರು ಗಲಭೆ ಉಂಟು ಮಾಡಲಿದ್ದು, ಗಣೇಶೋತ್ಸವಕ್ಕೆ ಬರುವವರು ಶಸ್ತ್ರಸಜ್ಜಿತರಾಗಿ ಬನ್ನಿ ಎಂದು ಕರೆ ನೀಡಲಾಗಿದೆ.

ದುರುದ್ದೇಶದ ಈ ಕರಪತ್ರ ಪೊಲೀಸರನ್ನು ಆತಂಕಕ್ಕೀಡು ಮಾಡಿದೆ. ಕೋಮು ಸೌಹಾರ್ದತೆಗೆ ಹೆಸರಾಗಿರುವ ನಗರದಲ್ಲಿ ಈ ಕರಪತ್ರವನ್ನು ರಾಜಕೀಯ ಪ್ರೇರಿತ ಕಿಡಿಗೇಡಿಗಳು ಹಂಚಿದ್ದಾರೆ ಎಂದು ಸಾರ್ವಜನಿಕರೇ ಮಾತನಾಡಿಕೊಳ್ಳುತ್ತಿದ್ದಾರೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಬುಧವಾರ ವಿವಿಧ ಕೋಮುಗಳ ಮುಖಂಡರ ಜತೆ ಅಧಿಕಾರಿಗಳು ಸಭೆ ನಡೆಸಿದ್ದರು. ಯಾವುದೇ ಗಲಾಟೆ, ಗದ್ದಲಕ್ಕೆ ಆಸ್ಪದ ನೀಡುವುದಿಲ್ಲ. ನಾವೆಲ್ಲ ಅಣ್ಣತಮ್ಮಂದಿರಂತೆ ಬದುಕುತ್ತಿರುವಾಗ ಪರಸ್ಪರ ಸಂಶಯ ಬೇಡವೆಂದು ಎಲ್ಲ ಮುಖಂಡರೇ ಅಧಿಕಾರಿಗಳಿಗೆ ಭರವಸೆ ತುಂಬಿದ್ದರು. ಹೀಗಿದ್ದರೂ ಕರಪತ್ರ ಹರಿದಾಡುತ್ತಿರುವುದು ಎರಡೂ ಕೋಮಿನ ಮುಖಂಡರಲ್ಲಿ, ಜನರಲ್ಲಿ ದಿಗಿಲು ಹುಟ್ಟಿಸಿದೆ. ಪೊಲೀಸ್ ಅಧಿಕಾರಿಗಳು ಕರಪತ್ರ ಸೃಷ್ಟಿಸಿ ಎಸೆದವರನ್ನು ಹುಡುಕಲು ಮತ್ತು ಅದು ಮುದ್ರಣಗೊಂಡ ಮೂಲವನ್ನು ಪತ್ತೆ ಹಚ್ಚಲು ಗಂಭೀರ ಪ್ರಯತ್ನ ಮಾಡಿದ್ದಾರೆ.

ರಾಜಕೀಯ ದುರುದ್ದೇಶ ಕೃತ್ಯ
ನಗರದ ಕೋಮು ಸೌಹಾರ್ದ ಕೆಡಿಸಲು, ರಾಜಕೀಯ ಲಾಭ ಪಡೆಯಲು ಕಿಡಿಗೇಡಿಗಳು ಈ ಕೃತ್ಯ ಎಸಗಿರುವುದು ಸ್ಪಷ್ಟ. ಕರ ಪತ್ರದಲ್ಲಿರುವಂತೆ ಯಾವುದೇ ಸಂಘಟನೆ ನಗರದಲ್ಲಿ ಇಲ್ಲ. ತಮ್ಮ ಅಭಿವೃದ್ಧಿ ಕೆಲಸ ಸಹಿಸದವರು ಹೆಸರಿಗೆ ಮಸಿ ಬಳಿಯಲು ಮತ್ತು ಜನರನ್ನು ದಿಕ್ಕು ತಪ್ಪಿಸಲು ಪಿತೂರಿ ನಡೆಸಿದ್ದಾರೆ ಎಂದು ಶಾಸಕ ಬಿ.ಸಿ.ನಾಗೇಶ್ ದೂರಿದ್ದಾರೆ.

ಮಾಜಿ ಶಾಸಕರ ದಿಗ್ಭ್ರಮೆ
ಕರಪತ್ರ ನೋಡಿ ದಿಗ್ಭ್ರಮೆಯಾಯಿತು. ಈ ನಗರ ಮತ್ತು ತಾಲ್ಲೂಕು ಕೋಮು ಗಲಭೆಗೆ ಆಸ್ಪದ ಕೊಡುವ ನೆಲವಲ್ಲ. ಇದು ರಾಜಕೀಯ ಪ್ರೇರಿತ ಕಿಡಿಗೇಡಿಗಳ ಕೃತ್ಯ ಎಂಬುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ ಮಾಜಿ ಶಾಸಕ ಕೆ.ಷಡಕ್ಷರಿ.

ಆತಂಕ ಬೇಡ-ಪೊಲೀಸ್
ಕರಪತ್ರ ಎಸೆದವರನ್ನು ಹುಡುಕಲು ಕ್ರಮ ಕೈಗೊಳ್ಳಲಾಗಿದೆ. ಅದು ಮುದ್ರಣಗೊಂಡಿರುವ ಮೂಲ ಪತ್ತೆ ಹಚ್ಚಲು ಗಂಭೀರ ಪ್ರಯತ್ನ ಮಾಡಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.