ADVERTISEMENT

ಹಳಬರು- ಹೊಸಬರ ನಡುವೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 6:30 IST
Last Updated 5 ಫೆಬ್ರುವರಿ 2011, 6:30 IST

ತುಮಕೂರು: ಐವರೊಳಗೆ ಯಾರು ಹಿತವರು? ಎನ್ನುವುದಕ್ಕಿಂತ ಇಬ್ಬರಲ್ಲಿ ಯಾರಿಗೆ ಮೊದಲ ಅವಕಾಶ! ಎನ್ನುವುದೇ ಈಗ ಹೆಚ್ಚು ಚರ್ಚಿತ ವಿಷಯ.ಆನಂದ ರವಿ (ಕಿಬ್ಬನಹಳ್ಳಿ), ಡಾ.ಬಿ.ಎನ್.ರವಿ (ಅಮೃತೂರು), ಸಿ.ಆರ್.ಉಮೇಶ್ (ನಾದೂರು), ಮುಕುಂದರಾವ್ (ನಿಟ್ಟೂರು), ಆರ್.ಸಿ.ಆಂಜನಪ್ಪ (ವೆಂಕಟಾಪುರ) ಹೆಸರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದವರ ‘ರೇಸ್’ನಲ್ಲಿ ಪ್ರಧಾನವಾಗಿ ಕೇಳಿಬಂದಿತ್ತು. ಈಗ ಫೈನಲ್ ಪಂದ್ಯದಂತಾಗಿರುವ ಅಂತಿಮ ಸುತ್ತಿನ ಪೈಪೋಟಿಯಲ್ಲಿ ಆನಂದರವಿ ಮತ್ತು ಡಾ.ಬಿ.ಎನ್.ರವಿ ನಡುವೆ ಅಧ್ಯಕ್ಷ ಸ್ಥಾನ ಅಲಂಕರಿಸಲು ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಸ್ಪರ್ಧೆ ತಾರಕ್ಕೇರಿರುವುದನ್ನು ಅರ್ಥ ಮಾಡಿಕೊಂಡೇ ಪಕ್ಷದ ವರಿಷ್ಠರು ಅಧಿಕಾರವನ್ನು ತಲಾ 10-10 ತಿಂಗಳಿಗೆ ಹಂಚಿಕೆ ಮಾಡಿದ್ದಾರೆ. ಆದರೆ, ಯಾರು ಮೊದಲು ಅಧಿಕಾರ ಹಿಡಿಯುತ್ತಾರೆ? ಎನ್ನುವುದೇ ಸದ್ಯಕ್ಕೆ ಕುತೂಹಲ. ಪಕ್ಷದೊಳಗೂ, ಹೊರಗೂ ಈ ಕುತೂಹಲ ಇಮ್ಮಡಿಸಿದೆ. ಪಕ್ಷದ ವರಿಷ್ಠರು ಮುಚ್ಚಿದ ಲಕೋಟೆಯನ್ನು ವೀಕ್ಷಕರ ಕೈಯಲ್ಲಿಟ್ಟು ಕಳುಹಿಸುವ ಮೂಲಕ ಶನಿವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಕುತೂಹಲಕ್ಕೆ ತೆರೆ ಬೀಳಲಿದೆ. ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.

ಜಿ.ಪಂ.ನಲ್ಲಿ ಈ ಬಾರಿ ಅತ್ಯಧಿಕ 33 ಸ್ಥಾನ 33 ಗೆದ್ದುಕೊಂಡಿರುವ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿರುವುದೇ ತಲೆನೋವಾಗಿಸಿದೆ. ಈಗಾಗಲೇ ಎರಡು ಸುತ್ತಿನ ಸಭೆ ನಡೆದರೂ ಅಂತಿಮ ತೀರ್ಮಾನಕ್ಕೆ ಬರಲು ಪಕ್ಷದ ವರಿಷ್ಠರಿಗೆ ಸಾಧ್ಯವಾಗಿಲ್ಲ. ಪಕ್ಷದ ಜಿಲ್ಲಾ ಅಧ್ಯಕ್ಷ, ಶಾಸಕರು, ಸದಸ್ಯರ ಅಭಿಪ್ರಾಯ ಪಡೆದು, ಅಂತಿಮ ತೀರ್ಮಾನವನ್ನು ತಾವೇ ತೆಗೆದುಕೊಳ್ಳುವುದಾಗಿ ಹೇಳಿ ಕಳುಹಿಸಿದ್ದಾರೆ. ‘ರೇಸ್’ನಲ್ಲಿರುವ ಆಕಾಂಕ್ಷಿಗಳೆಲ್ಲರೂ ವರಿಷ್ಠರ ತೀರ್ಮಾನಕ್ಕೆ ಬದ್ಧ ಎನ್ನುವ ‘ಮಂತ್ರ’ ಪಠಿಸುತ್ತಿದ್ದಾರೆ.

ಚುನಾವಣೆ ಪ್ರಕ್ರಿಯೆ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಹೆಸರು ಅಂತಿಮವಾಗಲಿದೆ. ತಾನು ಸೂಚಿಸಿದ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಲು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಮುಚ್ಚಿದ ಲಕೋಟೆಯಲ್ಲಿ ಶಿಫಾರಸು ಪತ್ರ ಕಳುಹಿಸುವುದನ್ನು ಪಕ್ಷದ ಅಧಿಕೃತ ಮೂಲಗಳು ಖಚಿತಪಡಿಸಿವೆ.

ಉಪಾಧ್ಯಕ್ಷ ಸ್ಥಾನಕ್ಕೆ ಆರಂಭದಲ್ಲಿ ಪೈಪೋಟಿಯೇ ಇರಲಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಉಪಾಧ್ಯಕ್ಷ ಸ್ಥಾನಕ್ಕೂ ಈಗ ಪೈಪೋಟಿ ಶುರುವಾಗಿದೆ. ಟಿ.ನಾಗಮ್ಮ (ಕಡಬ), ಲಲಿತಮ್ಮ ಮಂಜುನಾಥ್ (ಕಳ್ಳಂಬೆಳ್ಳ), ನಾಗಮಣಿ (ನಾಗಲಮಡಿಕೆ) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನಾಗಮ್ಮ ಅಥವಾ ಲಲಿತಮ್ಮ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿರುವುದನ್ನು ಪಕ್ಷದ ಮೂಲಗಳು ದೃಢಪಡಿಸಿವೆ.

ಪಕ್ಷದ ವರಿಷ್ಠರು ಉನ್ನತ ಶಿಕ್ಷಣ ಪಡೆದವರಿಗೆ ಮಣೆ ಹಾಕಿದರೆ ಮೊದಲ ಬಾರಿಗೆ ಗೆದ್ದಿರುವ ಡಾ.ಬಿ.ಎನ್.ರವಿ ಅವರಿಗೆ ಮೊದಲ ಅವಧಿ ಅಧಿಕಾರ ಸಿಗಬಹುದು. ಹಿರಿತನ ಮತ್ತು ಹ್ಯಾಟ್ರಿಕ್ ಗೆಲುವು ಗಣನೆಗೆ ತೆಗೆದುಕೊಂಡರೆ ಆನಂದ ರವಿಗೆ ಮೊದಲ ಆದ್ಯತೆ ಸಿಗಲಿದೆ ಎಂಬ ಲೆಕ್ಕಾಚಾರ ಪಕ್ಷದ ವಲಯದಲ್ಲಿ ನಡೆದಿದೆ.57 ಸದಸ್ಯ ಬಲದ ಜಿ.ಪಂ.ನಲ್ಲಿ 33 ಸ್ಥಾನಗಳನ್ನು ಗೆದ್ದುಕೊಂಡಿರುವ ಜೆಡಿಎಸ್ ಯಾವುದೇ ಪಕ್ಷದ ನೆರವಿಲ್ಲದೆ ಅಧಿಕಾರ ಹಿಡಿದಿದೆ. ಬಿಜೆಪಿ 13, ಕಾಂಗ್ರೆಸ್ 10, ಜೆಡಿಯು ಒಬ್ಬ ಸದಸ್ಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.