ADVERTISEMENT

ಹೈನುಗಾರರ ಆಶಾಕಿರಣ ಜನಶ್ರೀ ಗುಂಪು ವಿಮೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 9:15 IST
Last Updated 4 ಜೂನ್ 2011, 9:15 IST

ತುಮಕೂರು: ಹೈನುಗಾರರ ಹಿತದೃಷ್ಟಿಯಿಂದ ಭಾರತೀಯ ಜೀವ ವಿಮಾ ನಿಗಮದ ಸಹಯೋಗದೊಂದಿಗೆ ತುಮಕೂರು ಹಾಲು ಒಕ್ಕೂಟವು ಜನಶ್ರೀ ಗುಂಪು ವಿಮೆ ಯೋಜನೆಯನ್ನು ಜಾರಿಗೊಳಿಸಿದೆ.

ಯೋಜನೆಗೆ ರೂ. 27 ಲಕ್ಷವನ್ನು ಒಕ್ಕೂಟ ಕಾಯ್ದಿರಿಸಿದೆ. ರೂ. 50 ಸಾವಿರ ನೆರವು ನೀಡುವ ಯೋಜನೆಗೆ ಪ್ರತಿ ಸದಸ್ಯರು ವರ್ಷಕ್ಕೆ ರೂ. 208 ಕಟ್ಟಬೇಕಾಗುತ್ತದೆ. ಇದರಲ್ಲಿ ರೂ. 100 ಅನುದಾನ ಕೇಂದ್ರ ಸರ್ಕಾರದ ಸಾಮಾಜಿಕ ನಿಧಿಯಿಂದ ಲಭಿಸುತ್ತದೆ. ಮೊದಲ ಹಂತದಲ್ಲಿ ಜಿಲ್ಲೆಯಿಂದ ಒಟ್ಟು 24,976 ಸದಸ್ಯರು ವಿಮೆಗೆ ಒಳಪಟ್ಟಿದ್ದಾರೆ.

ಯೋಜನೆ ಇರಬೇಕಾದ ಅರ್ಹತೆಗಳು: ಸಂಘದ ಸದಸ್ಯರಾಗಿದ್ದು, 59 ವರ್ಷ ಮೀರಿರಬಾರದು. ಸೌಲಭ್ಯ ಪಡೆಯಲು ದೃಢೀಕರಣ ಹಾಗೂ ಅಪಘಾತದಲ್ಲಿ ಮರಣ ಹೊಂದಿದ ಪೊಲೀಸ್ ದಾಖಲೆ ಅಗತ್ಯ.

ಯೋಜನೆಯಲ್ಲಿ ನೋಂದಾಯಿಸಲಾದ ಪ್ರತಿ ಸದಸ್ಯರ ಗರಿಷ್ಠ ಇಬ್ಬರು ಮಕ್ಕಳಿಗೆ 2011-12ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ವರ್ಷಕ್ಕೆ ರೂ. 1200 ವೇತನ ಸೌಲಭ್ಯ ಇದೆ. ಜೂನ್ 1ರಿಂದ ಒಂದು ವರ್ಷದ ಅವಧಿಗೆ ಯೋಜನೆ ಜಾರಿಯಲ್ಲಿರುತ್ತದೆ.

9ರಿಂದ ಬ್ರಹ್ಮೋತ್ಸವ

ತುಮಕೂರು ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿ, ಆಂಜನೇಯ ಸ್ವಾಮಿ ಮತ್ತು ಉತ್ಸವ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವ, 7ನೇ ವರ್ಷದ ಬ್ರಹ್ಮೋತ್ಸವ ಜೂ. 9ರಿಂದ 13ರ ವರೆಗೆ ನಡೆಯಲಿದೆ ಎಂದು ಶ್ರೀನಿವಾಸ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಕುಮಾರ್ ತಿಳಿಸಿದ್ದಾರೆ.

ಜೂ. 10ರಂದು ಬೆಳಿಗ್ಗೆ 6.30ರಿಂದ ಗೋಪೂಜೆ, ಪ್ರಾಣ ಪ್ರತಿಷ್ಠಾಪನೆ, ಹೋಮ, ಬೆಳಿಗ್ಗೆ 7.30ರಿಂದ ದೇವರ ಪ್ರತಿಷ್ಠಾಪನೆ, ಕಳಶ ಪ್ರತಿಷ್ಠಾಪನೆ ನಡೆಯಲಿದೆ. 12ರಂದು ಬ್ರಹ್ಮೋತ್ಸವ ನಡೆಯಲಿದೆ.

`ಉತ್ಪನ್ನದ ಮೌಲ್ಯ ಹೆಚ್ಚಲಿ~
ತಿಪಟೂರು: ಗ್ರಾಮೀಣ ಮಹಿಳೆಯರು ಸಂಘಟಿತರಾಗಿ ತಮ್ಮ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಡಾ.ವೈ.ಎನ್.ಶಿವಲಿಂಗಯ್ಯ ತಿಳಿಸಿದರು.

ತಾಲ್ಲೂಕಿನ ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಕೃಷಿ ವಿ.ವಿ, ಮೊಟ್ಟೆ ಸಮನ್ವಯ ಸಮಿತಿಯಿಂದ ಸ್ತ್ರೀಶಕ್ತಿ ಮಹಿಳೆಯರಿಗೆ ಗುರುವಾರ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರದಲ್ಲಿ ಮಾತನಾಡಿ, ಮನೆ ಧಾನ್ಯದಿಂದ ಬೇಕರಿ ಪದಾರ್ಥ ತಯಾರಿಸಿ ಮಾರುವ ದುಡಿಮೆ ಮಾರ್ಗ ಸ್ತ್ರೀಶಕ್ತಿ ಸಂಘಗಳಿಗೆ ಹೇಳಿ ಮಾಡಿಸಿದಂತಿವೆ ಎಂದರು.

ತಹಶೀಲ್ದಾರ್ ಎ.ಬಿ.ವಿಜಯಕುಮಾರ್ ಮಾತನಾಡಿ, ಸ್ತ್ರೀಶಕ್ತಿ ಮಹಿಳೆಯರು ಆರ್ಥಿಕ ಚಟುವಟಿಕೆ ಕೈಗೊಂಡು ಸ್ವಾಭಿಮಾನ ಬೆಳೆಸಿಕೊಂಡು, ಕುಟುಂಬದ ಜೀವನ ಮಟ್ಟ ಸುಧಾರಿಸಬಹುದು. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಸಕ್ತಿಯಿಂದ ಪರಿಗಣಿಸಬೇಕು ಎಂದರು.
ಸಿಡಿಪಿಒ ಎಸ್.ನಟರಾಜು ಮಾತನಾಡಿದರು.

ವಿಷಯ ತಜ್ಞರಾದ ಡಾ.ಗಿರಿಧರ್, ಡಾ.ರಾಣಿ ಅರವಿಂದ್, ಡಾ.ಸುಕನ್ಯಾ ವಿವಿಧ ಬೇಕರಿ ಉತ್ಪನ್ನ ತಯಾರಿಕೆ ಬಗ್ಗೆ ವಿವರಿಸಿದರು. ಡಾ.ಮಂಜುನಾಥ್ ಸೂಗೂರು ಸ್ವಾಗತಿಸಿದರು. ಎಸಿಡಿಪಿಒ ಸುಂದರಮ್ಮ ವಂದಿಸಿದರು. ಪಿ.ಓಂಕಾರಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.