ADVERTISEMENT

₹ 40 ಕೋಟಿ ಕಾಮಗಾರಿ; ಮುಖ್ಯಮಂತ್ರಿಯಿಂದಲೇ ತಡೆ ಆದೇಶ

ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಡಿ.ಸಿ.ಗೌರಿಶಂಕರ್ ಆರೋಪ, ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 9:56 IST
Last Updated 25 ಅಕ್ಟೋಬರ್ 2019, 9:56 IST
ಡಿ.ಸಿ.ಗೌರಿಶಂಕರ್‌
ಡಿ.ಸಿ.ಗೌರಿಶಂಕರ್‌   

ತುಮಕೂರು: 'ಹಿಂದಿನ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಮಂಜೂರು ಮಾಡಿದ ₹ 40.40 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ತಡೆ ಆದೇಶ ನೀಡಿದ್ದಾರೆ’ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಒತ್ತಾಯ ಮಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ’ಕಾಮಗಾರಿ ತಡೆ ಆದೇಶ ಒಂದು ವೇಳೆ ಹಿಂದಕ್ಕೆ ಪಡೆಯದೇ ಇದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಕಾನೂನು ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದೇನೆ. ಅವಕಾಶವಿದ್ದರೆ ಕಾನೂನು ಹೋರಾಟ ಮಾಡಿಯಾದರೂ ಅಭಿವೃದ್ಧಿ ಕಾಮಗಾರಿ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಯವರ ಈ ರೀತಿಯ ಆದೇಶದ ಹಿಂದೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಬಿಜೆಪಿ ಮಾಜಿ ಶಾಸಕರ ಕೈವಾಡವೂ ಇದೆ ಎಂದು ಬಿ.ಸುರೇಶ್‌ಗೌಡ ಹೆಸರು ಹೇಳದೇ ಆರೋಪಿಸಿದರು.

ADVERTISEMENT

’ಹಿಂದಿನ ಸರ್ಕಾರ ಮಂಜೂರು ಮಾಡಿದ ಕಾಮಗಾರಿಗೆ ತಡೆ ಆದೇಶ ನೀಡುವುದು ಯಾವ ನ್ಯಾಯ? ಕೂಡಲೇ ಕಾಮಗಾರಿಗೆ ಅವಕಾಶ ಕೊಡಬೇಕು ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಅವರ ಕಚೇರಿ ಅಧಿಕಾರಿಗಳನ್ನೂ ಭೇಟಿ ಮಾಡಿ ಗಮನಕ್ಕೆ ತಂದಿದ್ದೇನೆ’ ಎಂದು ಹೇಳಿದರು.

’ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ನಾನು ಮತ್ತು ನನ್ನ ತಂದೆ ಬಿಜೆಪಿ ಸೇರಿದ್ದೆವು. ಕನಿಷ್ಠ ಪಕ್ಷ ಆ ಋಣವನ್ನಾದರೂ ಈಗ ಮುಖ್ಯಮಂತ್ರಿ ತೀರಿಸಲಿ’ ಎಂದು ಒತ್ತಾಯಿಸಿದರು.

ವರ್ಗಾವಣೆಗೆ ಹಾಲಿ, ಮಾಜಿ ಶಾಸಕರ ಪೈಪೋಟಿ

'ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕೆ ತುಮಕೂರು ತಾಲ್ಲೂಕಿನ ಅಧಿಕಾರಿಗಳ ವರ್ಗಾವಣೆಗೆ ಬಿಜೆಪಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಪೈಪೋಟಿ ನಡೆಯುತ್ತಿದೆ' ಎಂದು ಶಾಸಕ ಡಿ.ಸಿ.ಗೌರಿಶಂಕರ್ ಆರೋಪಿಸಿದರು.

ಈಚೆಗಷ್ಟೇ ಬಂದಿರುವ ತುಮಕೂರು ತಹಶೀಲ್ದಾರ್ ಯೋಗಾನಂದ್ ಅವರನ್ನು ವರ್ಗಾವಣೆ ಮಾಡಿ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮುಖ್ಯಮಂತ್ರಿಗೆ ಪತ್ರ ಬರೆದರೆ ತುಮಕೂರು ಗ್ರಾಮಾಂತರ ಬಿಜೆಪಿ ಮಾಜಿ ಶಾಸಕ ವರ್ಗಾವಣೆ ಮಾಡಬೇಡಿ ಎಂದು ಅದೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ’ ಎಂದು ಆರೋಪಿಸಿದರು.

‘ಕ್ಯಾತ್ಸಂದ್ರ ಠಾಣೆಗೆ ಈಚೆಗಷ್ಟೇ ಅಧಿಕಾರವಹಿಸಿಕೊಂಡಿದ್ದ ರಾಮ್‌ ಪ್ರಸಾದ್ ಎಂಬ ಸಬ್ ಇನ್‌ ಸ್ಪೆಕ್ಟರ್‌ರನ್ನು ಬಿಜೆಪಿ ಮಾಜಿ ಶಾಸಕ ಕೇವಲ 30 ದಿನಗಳಲ್ಲಿ ವರ್ಗಾವಣೆ ಮಾಡಿಸಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲೂ ಪಿಡಿಒ ವರ್ಗಾವಣೆಗೆ ಮಾಜಿ ಶಾಸಕ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ’ ಎಂದು ಆರೋಪಿಸಿದರು.

‘ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಜಿ ಶಾಸಕರು ಪದೇ ಪದೇ ಆರೋಪ ಮಾಡುತ್ತಿದ್ದರು. ಶಾಸಕ ಗೌರಿಶಂಕರ್ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಟೀಕಿಸುತ್ತಿದ್ದರು. ಈಗ ಅವರೇ ಅದನ್ನು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಗರಹುಕುಂ ಸಾಗುವಳಿ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿದ ಹಿಂದಿನ ತಹಶೀಲ್ದಾರ್‌ ನಾಗರಾಜ್ ಅವರ ಅಮಾನತಿಗೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ’ ಎಂದರು.

’ಈ ಬಗ್ಗೆ ಕಂದಾಯ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಿದ್ದು, ಶೀಘ್ರ ಕ್ರಮವಾಗಲಿದೆ. ಅಲ್ಲದೇ ಈ ಪ್ರಕರಣದಲ್ಲಿ ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಶಾಸಕನೂ ಸೇರಿದಂತೆ ಅನೇಕರು ಜೈಲಿಗೆ ಹೋಗುವ ಸಾಧ್ಯತೆ ಇದೆ’ ಎಂದು ಗೌರಿಶಂಕರ್ ಹೇಳಿದರು.

ಜಿಲ್ಲಾ ಘಟಕ ಅಧ್ಯಕ್ಷ ಆರ್‌.ಸಿ.ಆಂಜನಪ್ಪ, ಗ್ರಾಮಾಂತರ ಅಧ್ಯಕ್ಷ ಹಾಲನೂರು ಅನಂತಕುಮಾರ್, ಹಿರೇಹಳ್ಳಿ ಮಹೇಶ್, ನರುಗನಹಳ್ಳಿ ವಿಜಯಕುಮಾರ್, ಬೆಳಗುಂಬ ವೆಂಕಟೇಶ್, ಬೆಳ್ಳಿ ಲೋಕೇಶ್, ತುಮಕೂರು ತಾಲ್ಲೂಕು ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ಗೌರಮ್ಮ, ಸಾಯಿರಾ ಬಾನು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.