ADVERTISEMENT

13ನೇ ಶತಮಾನದ ಬೆಳಗುಲಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 12:05 IST
Last Updated 12 ಅಕ್ಟೋಬರ್ 2012, 12:05 IST
13ನೇ ಶತಮಾನದ ಬೆಳಗುಲಿ
13ನೇ ಶತಮಾನದ ಬೆಳಗುಲಿ   

ಮೊಲವೊಂದು ನಾಯಿ ಸೋಲಿಸಿದ ಗಂಡು ಭೂಮಿ, ಹಾಗಲವಾಡಿ ಪಾಳೆಗಾರರ ಕೇಂದ್ರಸ್ಥಾನ, ತಾಲ್ಲೂಕಿನ ಏಕೈಕ ಜೈನರ ಬೀಡು ಹೀಗೆ ಅನೇಕ ವಿಶೇಷಗಳ ಆಗರ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳಗುಲಿ ಗ್ರಾಮ.
13ನೇ ಶತಮಾನದಲ್ಲಿ ಹಾಗಲವಾಡಿ ಪಾಳೆಗಾರರು ಬೆಳಗುಲಿ ಗ್ರಾಮವನ್ನು ಕಟ್ಟಿದರು ಎಂಬ ಐಹಿತ್ಯವಿದೆ.

ಗ್ರಾಮದ ಪಕ್ಕದ ಬೆಟ್ಟದಲ್ಲಿರುವ ಹೊನ್ನೆಮರಡಿ ರಂಗನಾಥಸ್ವಾಮಿ ದೇವಾಲಯದಲ್ಲಿರುವ ಕಲ್ಲಿನ ಶಾಸನ ಇದನ್ನು ಪುಷ್ಟೀಕರಿಸುತ್ತದೆ. ಗ್ರಾಮ ಸ್ಥಾಪಿಸಿದ ನಂತರ ಅಂದಿನ ಚಿತ್ರದುರ್ಗ ಪಾಳೆಗಾರರಿಂದ ರಕ್ಷಣೆಗಾಗಿ ಗ್ರಾಮದ ಸುತ್ತಲೂ ಕೋಟೆ ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಆದರೆ ಇಂದು ಕೋಟೆಯ ಕುರುಹು ಉಳಿದಿಲ್ಲ.

1356ರಲ್ಲಿ ಹಾಗಲವಾಡಿ ಪಾಳೆಗಾರ ಮಲೆಯ ಮಾದೆ ನಾಯಕನು ಈಗಿರುವ ರಂಗನಾಥಸ್ವಾಮಿ ದೇವಾಲಯ ನಿರ್ಮಿಸಿದರು ಎಂದು ಕಲ್ಲಿನ ಶಾಸನದಲ್ಲಿ ಕೆತ್ತಲಾಗಿದೆ. ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಕಂಡು ಬರುವ ರಂಗನಾಥಸ್ವಾಮಿ ದೇವಾಲಯಗಳಲ್ಲಿ ಏಕಕೂಟ ಅಂದರೆ ಒಂದೇ ಗರ್ಭಗುಡಿಯಲ್ಲಿ ಲಕ್ಷ್ಮೀ ಹಾಗೂ ರಂಗನಾಥಸ್ವಾಮಿ ಪ್ರತಿಷ್ಠಾಪಿಸಿರುತ್ತಾರೆ. ಆದರೆ ಇಲ್ಲಿ ಪೂರ್ವಾಭಿಮುಖವಾಗಿ ರಂಗನಾಥಸ್ವಾಮಿ ಹಾಗೂ ಉತ್ತರಾಭಿಮುಖವಾಗಿ ಲಕ್ಷ್ಮೀ ಗರ್ಭಗುಡಿಗಳು ಪ್ರತ್ಯೇಕವಾಗಿ ನಿರ್ಮಿಸಿರುವುದು ವಿಶೇಷ. ಹೀಗಾಗಿ ಇದು ದ್ವಿಕೂಟ ದೇವಸ್ಥಾನ ಎಂದು ಹೇಳಲಾಗುತ್ತದೆ.

ಪಾಳೆಗಾರರ ಕಾಲದಲ್ಲಿ ಬೆಳಗುಲಿ ಗ್ರಾಮದಲ್ಲಿ ಲಿಂಗಾಯತ ಸಮುದಾಯದ 300ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿದ್ದವು. ಆದರೆ ಇಲ್ಲಿ ಅಭಿವೃದ್ಧಿ ಸಾಧ್ಯವಾಗದೇ ಕುಟುಂಬಗಳು ನಶಿಸಿ, ಗೂಳೆ ಹೋದರು ಎನ್ನಲಾಗಿದೆ.
ಗ್ರಾಮ ಉಚ್ಛ್ರಾಯ ಹಂತ ತಲುಪುವ ಹಂತದಲ್ಲಿದ್ದಾಗ ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲ್ಲೂಕಿನ ಕುಂದುರ್ಪಿಯ ಜೈನ ಧರ್ಮದ ಗುಡುದೇಗೌಡ ಎಂಬುವರು ಗ್ರಾಮ ತೊರೆದು ದಾಸಯ್ಯನ ಜತೆ ದಕ್ಷಿಣಾಭಿಮುಖಿವಾಗಿ ಹೊರಟು ಹೊಸ ಜಾಗದ ಹುಡುಕಾಟದಲ್ಲಿದ್ದಾಗ ಬೆಳಗುಲಿ ಪಕ್ಕದಲ್ಲಿದ್ದ ದಟ್ಟ ಕಾಡಿನಲ್ಲಿ ಮೊಲವೊಂದು ನಾಯಿಯನ್ನು ಹಿಮ್ಮೆಟ್ಟಿ ಹೊಡಿಸುತ್ತಿರುವುದನ್ನು ಕಾಣುತ್ತಾರೆ. ಆಗ ಪುರಾಣ ಶಾಸ್ತ್ರ ಬಲ್ಲವನಾಗಿದ್ದ ದಾಸಯ್ಯ ಈ ಸ್ಥಳ ಗಂಡು ಭೂಮಿ, ಇದೇ ನಿಮಗೆ ಪ್ರಶಸ್ತವಾದ ಸ್ಥಳ ಎಂದು ತಿಳಿಸುತ್ತಾನೆ. ಗುಡುದೇಗೌಡನ ವಂಶಸ್ಥರನ್ನು ಇಲ್ಲಿ ಇಂದಿಗೂ ಕಾಣಬಹುದಾಗಿದೆ. ಸುಮಾರು 40ಕ್ಕೂ ಹೆಚ್ಚು ಜೈನ ಕುಟುಂಬಗಳು ವಾಸವಿದ್ದು ಕೃಷಿಯನ್ನು ಅವಲಂಬಿಸಿ ಬದುಕುತ್ತಿವೆ.

ಗ್ರಾಮದಲ್ಲಿ ಸುಂದರ ಬಸದಿ ಇದ್ದು ತಾಲ್ಲೂಕಿನ ಏಕೈಕ ಬಸದಿ ಎನ್ನಲಾಗುತ್ತದೆ. ಗ್ರಾಮದ ಐತಿಹ್ಯಗಳ ಬಗ್ಗೆ ಈಗಲೂ ಸಂಶೋಧನೆ ಮಾಡುತ್ತಿದ್ದೇನೆ. ಕೆಲವು ವಿಷಯಗಳು ಲಭ್ಯವಾಗಿದ್ದು ಮತ್ತೆ ಕೆಲವು ಲಭ್ಯವಾಗಿಲ್ಲ ಎನ್ನುತ್ತಾರೆ ಉಪನ್ಯಾಸಕ ಬೆಳಗುಲಿ ಶಶಿಭೂಷಣ್.

ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಬೆಳಗುಲಿ ಗುಡ್ಡದಲ್ಲಿ ರಂಗನಾಥಸ್ವಾಮಿ ವಿಶೇಷ ಜಾತ್ರೆ ನಡೆಯುತ್ತದೆ. ಕೇವಲ 2ರಿಂದ 3 ಗಂಟೆ ನಡೆಯುವ ಜಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಾರೆ. ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಇದ್ದು ಮೂರು ವಿದ್ಯಾರ್ಥಿ ನಿಲಯಗಳಿವೆ. ರಾಜ್ಯಸಭಾ ಸದಸ್ಯರಾಗಿದ್ದ ವಿಜಯಮಲ್ಯ ಅವರ ಅನುದಾನದ ವಿದ್ಯಾರ್ಥಿನಿಲಯ ಇಲ್ಲಿದೆ.

ಬಿಳಿಗೂಳಿ ಮುಂದೆ ಬೆಳಗುಲಿ
ಇಲ್ಲಿನ ರಂಗನಾಥಸ್ವಾಮಿಗೆ ಯಾವಾಗಲೂ ಬಿಳಿ ಬಸವನನ್ನೆ ಬಿಡುತ್ತಿದ್ದು ವಾಡಿಕೆ. ಗ್ರಾಮದ ತುಂಬಾ ಸುತ್ತಾಡುತ್ತಿದ್ದ ಬಸವನನ್ನು ಬಿಳಿಗೂಳಿ ಎಂದು ಕರೆಯುತ್ತಿದ್ದು ಅದೇ ಹೆಸರೇ ಗ್ರಾಮಕ್ಕೆ ಬಂದು ಕ್ರಮೇಣ ಬಿಳಿಗೂಳಿ ಪರಿವರ್ತನೆಯಾಗುತ್ತಾ ಬೆಳಗುಲಿ ಆಗಿರಬಹುದು ಎನ್ನಲಾಗುತ್ತದೆ. ಈಗಲೂ ರಂಗನಾಥಸ್ವಾಮಿಗೆ ಬಿಳಿ ಬಸವನನ್ನೆ ಬಿಡುವುದು ವಾಡಿಕೆಯಾಗಿದೆ.

ವಿಷ್ಣುವಿಗೆ ಜೈನರ ಪಾರುಪತ್ಯ
ಧರ್ಮಸ್ಥಳದಲ್ಲಿ ಶೈವ ದೇವರಿಗೆ ಜೈನ ಧರ್ಮದ ಡಾ.ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳಂತೆ ಬೆಳಗುಲಿಯ ರಂಗನಾಥಸ್ವಾಮಿ ದೇವಾಲಯದ ನಿರ್ವಹಣೆಯನ್ನು ಇಂದುಗೂ ಜೈನ ಸಮುದಾಯದವರೇ ನಡೆಸಿಕೊಂಡು ಬರುತ್ತಿರುವುದು ವಿಶೇಷ.

ಬೆಂಗಳೂರಿನಿಂದ ಎಳೆದು ತಂದ ರಥ
ಇಲ್ಲಿನ ರಂಗನಾಥಸ್ವಾಮಿಯ ಜಾತ್ರೆಯಲ್ಲಿ ಎಳೆಯುವ ತೇರು ವಿಶೇಷವಾಗಿದ್ದು ಮರದಿಂದ ಮಾಡಲಾಗಿದೆ. ಬೆಂಗಳೂರಿನಲ್ಲಿ ಮಾಡಲ್ಪಟ್ಟ ತೇರನ್ನು ಶೃಂಗಾರ ಮಾಡಿಕೊಂಡು ಅಲ್ಲಿಂದ ಎಳದೆ ತಂದರು ಎಂಬ ಪ್ರತೀತಿ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.