ADVERTISEMENT

4 ವರ್ಷದಲ್ಲಿ 177 ಮಕ್ಕಳು ಸಾವು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:42 IST
Last Updated 6 ಆಗಸ್ಟ್ 2025, 5:42 IST
ತುಮಕೂರು ತಾಲ್ಲೂಕಿನ ಊರುಕೆರೆ ಶಾಲೆಗೆ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಭೇಟಿ ನೀಡಿ ಮಕ್ಕಳ ಜತೆ ಮಾತುಕತೆ ನಡೆಸಿದರು
ತುಮಕೂರು ತಾಲ್ಲೂಕಿನ ಊರುಕೆರೆ ಶಾಲೆಗೆ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಭೇಟಿ ನೀಡಿ ಮಕ್ಕಳ ಜತೆ ಮಾತುಕತೆ ನಡೆಸಿದರು   

ತುಮಕೂರು: ಜಿಲ್ಲೆಯಲ್ಲಿ ಕಳೆದ 4 ವರ್ಷದಲ್ಲಿ 177 ಮಕ್ಕಳು ಅಸಹಜವಾಗಿ ಸಾವನ್ನಪ್ಪಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಅಸಹಜ ಸಾವು ತಡೆಗಟ್ಟುವ ಸಂಬಂಧ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದರು.

ಆತ್ಮಹತ್ಯೆಯಿಂದ 30, ನೀರಿನಲ್ಲಿ ಮುಳುಗಿ 48, ಬೆಂಕಿ ಹಾಗೂ ವಿದ್ಯುತ್ ಅವಘಡಗಳಿಂದ 17, ವಿಷಜಂತು ಕಚ್ಚಿ 17, ಅನಾರೋಗ್ಯದಿಂದ 25 ಸೇರಿದಂತೆ ಒಟ್ಟು 177 ಮಕ್ಕಳು ಸಾವನ್ನಪ್ಪಿವೆ. ಅಧಿಕಾರಿಗಳು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ನಿರ್ದೇಶಿಸಿದರು.

ADVERTISEMENT

ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಆರೋಗ್ಯ ತಪಾಸಣೆ ನಡೆಸಬೇಕು. ಕೃಷಿಹೊಂಡಗಳಿಗೆ ತಂತಿ ಬೇಲಿ ಅಳವಡಿಕೆ ಕಡ್ಡಾಯ. ಅಂತಿಮ ಬಿಲ್‌ ಮಾಡುವಾಗ ಇದನ್ನು ಖಚಿತ ಪಡಿಸಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿ ಜೀವ ಹಾನಿಯಾದರೆ ಕೃಷಿ ಹೊಂಡ ಮಾಲೀಕರು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಹೊಂಡಗಳಲ್ಲಿ ಮುಳುಗಿ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ವರದಿಗಳಿವೆ. ಈ ಬಗ್ಗೆ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಕಾನೂನು ಕೋಶದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.