ADVERTISEMENT

24ಕ್ಕೆ ಮಾನಸಿಕ ಅರಿವು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 5:30 IST
Last Updated 22 ಜೂನ್ 2012, 5:30 IST

ತುಮಕೂರು: ಹೈಕೋರ್ಟ್ ಸೂಚನೆಯಂತೆ ನಗರದಲ್ಲಿ ಜೂನ್ 24ರಂದು ಜಿಲ್ಲಾ ಮಟ್ಟದ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ ಮತ್ತು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಪ್ರಭಾರ ನ್ಯಾಯಾಧೀಶರಾದ ಸಚ್ಚಿದಾನಂದ ಪ್ರಸಾದ್ ಇಲ್ಲಿ ಗುರುವಾರ ತಿಳಿಸಿದರು.

ಜಿಲ್ಲಾ ನ್ಯಾಯಾಲಯ ಆವರಣದಿಂದ ಜಿಲ್ಲಾ ಆಸ್ಪತ್ರೆ ಆವರಣದವರೆಗೆ 24ರಂದು ಬೆಳಿಗ್ಗೆ 8.30ಕ್ಕೆ ಜಾಥಾ ನಡೆಯಲಿದೆ. ನಗರದ ಹೊರವಲಯದ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಬೆಳಿಗ್ಗೆ 10ರಿಂದ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರ ಮತ್ತು ಜಾಥಾವನ್ನು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಉದ್ಘಾಟಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಬಿ.ಪ್ರಭಾಕರ ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ, ನಿಮ್ಹಾನ್ಸ್ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್, ಮನೋವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎ.ಜಗದೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ವಿ.ಕರೂರು ಭಾಗವಹಿಸುವರು ಎಂದು ವಿವರಿಸಿದರು.

ನಂತರ ಮನೋರೋಗ ಕುರಿತು ನಡೆಯುವ ವಿಚಾರ ಗೋಷ್ಠಿಗಳಲ್ಲಿ ಮನೋರೋಗ ತಜ್ಞರಾದ ಡಾ.ಸಿ.ಆರ್.ಚಂದ್ರಶೇಖರ್, ಡಾ.ಎಂ.ಟಿ.ಸತ್ಯನಾರಾಯಣ, ಡಾ.ಸೋಮಶೇಖರ್ ಬಿಜ್ಜಳ್, ಡಾ.ಟಿ.ಎಸ್.ಎಸ್.ರಾವ್, ಡಾ.ಬಿ.ವಿ.ಕರೂರು, ಡಾ.ಹೇಮಂತಕುಮಾರ್, ಡಾ.ಲೋಕೇಶ್‌ಬಾಬು, ಡಾ.ಗುಂಡೇರಾವ್, ಡಾ.ಎಚ್.ಚಂದ್ರಶೇಖರ್ ಮುಂತಾದವರು ವಿಚಾರ ಮಂಡಿಸುವರು. ಮಧ್ಯಾಹ್ನ 2.30ರಿಂದ 4.30ರ ವರೆಗೆ ಸಂವಾದ ನಡೆಯಲಿದ್ದು, ಸಾರ್ವಜನಿಕರು ಸಹ ಭಾಗವಹಿಸಬಹುದು ಎಂದು ಅವರು ಹೇಳಿದರು.

ಬಸ್ ವ್ಯವಸ್ಥೆ: ಜಿಲ್ಲಾ ಆಸ್ಪತ್ರೆ ಆವರಣದಿಂದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ 24ರಂದು ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 1500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಮನೋರೋಗ ತಜ್ಞ ಡಾ.ಸೋಮಶೇಖರ್ ಬಿಜ್ಜಳ್ ಮಾತನಾಡಿ, ದೇಶದಲ್ಲಿ ಶೇ 20ರಿಂದ 30ರಷ್ಟು ಮಂದಿ ಒಂದಿಲ್ಲೊಂದು ಕಾರಣಕ್ಕೆ ಅಲ್ಪ ಪ್ರಮಾಣದ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ.

ಆದರೆ ಶೇ 1ರಷ್ಟು ಮಂದಿ ತೀವ್ರ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ. ಆದರೆ ತೀವ್ರ ರೋಗವನ್ನು ಸಹ ಗುಣಪಡಿಸಬಹುದು ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಮುಖ್ಯನ್ಯಾಯಿಕ ದಂಡಾಧಿಕಾರಿ ಸದಾನಂದ ಎಂ.ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎ.ನಂಜುಂಡಪ್ಪ, ಜಿಲ್ಲಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ರುದ್ರಮೂರ್ತಿ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.