ADVERTISEMENT

ತುಮಕೂರು | ನಿಯಂತ್ರಣಕ್ಕೆ ಬಾರದ ಡೆಂಗಿ: 7 ತಿಂಗಳಲ್ಲಿ 440 ಪ್ರಕರಣ

3 ದಿನದಲ್ಲಿ 52 ಜನರಲ್ಲಿ ಡೆಂಗಿ ದೃಢ, ನಿಯಂತ್ರಣಕ್ಕೆ ಬಾರದ ಡೆಂಗಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 14:20 IST
Last Updated 28 ಜುಲೈ 2024, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯಲ್ಲಿ ಡೆಂಗಿ ಹರಡುವಿಕೆಗೆ ಕಡಿವಾಣ ಬೀಳುತ್ತಿಲ್ಲ. ಕಳೆದ 3 ದಿನದಲ್ಲಿ ಹೊಸದಾಗಿ 52 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಜುಲೈ 25ರಂದು 31 ಜನರಲ್ಲಿ ಡೆಂಗಿ ದೃಢಪಟ್ಟಿದೆ.

ಹಿಂದಿನ ವರ್ಷಗಳಿಗಿಂತ ಈ ಬಾರಿ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ದಶಕದಲ್ಲೇ ಅತಿ ಹೆಚ್ಚು ಜನ ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. 2017ರಲ್ಲಿ 406 ಪ್ರಕರಣಗಳು ದಾಖಲಾಗಿದ್ದವು. ಅದರ ನಂತರ ಇದೇ ವರ್ಷ ಮತ್ತಷ್ಟು ಏರಿಕೆ ಕಂಡಿದೆ. ಜನವರಿ 1ರಿಂದ ಜುಲೈ 27ರ ವರೆಗೆ ಒಟ್ಟು 440 ಜನರಲ್ಲಿ ಡೆಂಗಿ ಖಚಿತ ಪಟ್ಟಿದೆ.

25ರಂದು 123 ಸಕ್ರಿಯ ಪ್ರಕರಣಗಳಿದ್ದವು, ಈಗ 106ಕ್ಕೆ ಇಳಿಕೆ ಕಂಡಿದೆ. ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 14, ಖಾಸಗಿ ಆಸ್ಪತ್ರೆಗಳಲ್ಲಿ 14 ಜನ ಸೇರಿ ಒಟ್ಟು 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆಯಿಂದ ಡೆಂಗಿ ಜಾಗೃತಿಗಾಗಿ ಜುಲೈ 23ರಿಂದ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ADVERTISEMENT

‘ಡೆಂಗಿ ರೋಗಿಗಳ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಕಾಯ್ದಿರಿಸಲಾಗಿದೆ. ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಎಲ್ಲರ ಆರೋಗ್ಯ ಸ್ಥಿರವಾಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

1 ಹಾಟ್‌ ಸ್ಪಾಟ್‌: ತಾಲ್ಲೂಕಿನ ಗೂಳೂರು ಹೋಬಳಿಯ ಕುಮ್ಮಂಜಿಪಾಳ್ಯ ಡೆಂಗಿ ಜ್ವರದ ಮೊದಲ ‘ಹಾಟ್‌ ಸ್ಪಾಟ್‌’ ಆಗಿದೆ. 290 ಜನ ವಾಸವಿರುವ ಹಳ್ಳಿಯಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ. ಡೆಂಗಿ ನಿಯಂತ್ರಣಕ್ಕೆ ಗ್ರಾಮದಲ್ಲಿ ಪ್ರತಿ ದಿನ ಫಾಗಿಂಗ್‌ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆ ಸಮೀಕ್ಷೆ ನಡೆಸುತ್ತಿದ್ದಾರೆ. ಜ್ವರದ ಲಕ್ಷಣಗಳು ಕಾಣಿಸಿದರೆ ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.

‘ಯಾವುದೇ ಜನವಸತಿ ಪ್ರದೇಶದಲ್ಲಿ 1ಕ್ಕಿಂತ ಹೆಚ್ಚು ಡೆಂಗಿ ಪ್ರಕರಣ ವರದಿಯಾದರೆ ಅಂತಹ ಪ್ರದೇಶವನ್ನು ‘ಹಾಟ್ ಸ್ಪಾಟ್’ ಎಂದು ಗುರುತಿಸಬೇಕು’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಈಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದರು. ಪ್ರಸ್ತುತ ಒಂದು ಹಾಟ್‌ ಸ್ಪಾಟ್‌ ಗುರುತಿಸಲಾಗಿದೆ.

ರಕ್ತ ಮಾದರಿ ಪರೀಕ್ಷೆ ಹೆಚ್ಚಳಕ್ಕೆ ಸೂಚನೆ
ಜ್ವರ ಸೇರಿದಂತೆ ಡೆಂಗಿ ರೋಗ ಲಕ್ಷಣ ಕಂಡು ಬಂದವರ ರಕ್ತ ಮಾದರಿ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಸ್ಪತ್ರೆಯ ಡೆಂಗಿ ವಾರ್ಡ್‌ಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ರಕ್ತ ಮಾದರಿ ಪರೀಕ್ಷೆ ಪ್ರಮಾಣ ಹೆಚ್ಚಿಸುವುದರಿಂದ ಡೆಂಗಿ ದೃಢಪಟ್ಟವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಬಹುದು. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗಿ ದೃಢ ಪಟ್ಟವರಿಗೆ ಚಿಕಿತ್ಸೆ ನೀಡಲು ನಿರ್ದೇಶಿಸಬೇಕು ಎಂದರು. ಎಷ್ಟು ಬಾರಿ ಸೂಚನೆ ನೀಡಿದರೂ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಸ್ವಚ್ಛತಾ ಕಾರ್ಯ ಮಾಡುವ ನೌಕರರ ಪಟ್ಟಿ ಹಾಗೂ ಅವರಿಗೆ ಪಾವತಿ ಮಾಡಿರುವ ವೇತನದ ವಿವರ ಸಲ್ಲಿಸುವಂತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.