ADVERTISEMENT

ಫ್ಲೆಕ್ಸ್‌, ಬ್ಯಾನರ್‌ ಹಾಕಲು ಪರವಾನಗಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 7:11 IST
Last Updated 22 ಜನವರಿ 2018, 7:11 IST

ಕೊರಟಗೆರೆ: ಪಟ್ಟಣದ ಪ್ರಧಾನ ರಸ್ತೆಯಲ್ಲಿ ಫ್ಲೆಕ್ಸ್, ಬಂಟ್ಟಿಂಗ್ಸ್ ಸೇರಿದಂತೆ ಬ್ಯಾನರ್ ಹಾಕಲು ಪಟ್ಟಣ ಪಂಚಾಯಿತಿ ಪರವಾನಗಿ ಕಡ್ಡಾಯವಾಗಿದೆ ಎಂದು ಸಿಪಿಐ ಎಸ್.ಮುನಿರಾಜು ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಪಟ್ಟಣದಲ್ಲಿ ಪ್ಲೇಕ್ಸ್ ಮತ್ತು ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ವಿವಿಧ ಸಂಘಟನೆಗಳ ನಡುವೆ ಶಾಂತಿ, ನೆಮ್ಮದಿಗೆ ಭಂಗ ಉಂಟಾಗುತ್ತಿದೆ’ ಎಂದರು.

ಯಾವುದೇ ಫ್ಲೆಕ್ಸ್ ಮತ್ತು ಬ್ಯಾನರ್ಸ್ ಕಟ್ಟಲು ಪಟ್ಟಣ ಪಂಚಾಯಿತಿ ನಿಗದಿ ಪಡಿಸಿದ ಸ್ಥಳಗಳಲ್ಲಿ ಪರವಾನಗಿ ಪಡೆದು 3 ದಿನಗಳ ಮಟ್ಟಿಗೆ ಮಾತ್ರ ಕಟ್ಟ ಬೇಕಾಗಿದೆ. ಮೂರು ದಿನಗಳ ನಂತರ ಅವರೇ ತಮ್ಮ ಸ್ವಂತ ಖರ್ಚಿನಿಂದ ತೆರವುಗೊಳಿಸಬೇಕು. ನಿಯಮ ಉಲ್ಲಂಘನೆ ಮಾಡಿದಲ್ಲಿ ಫ್ಲೆಕ್ಸ್ ಕಟ್ಟಿದ ವ್ಯಕ್ತಿಗಳ ಮೇಲೆ ನಿರ್ಧಾಕ್ಷಣ್ಯ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದರು.

ADVERTISEMENT

ಪಿಎಸ್ಐ ಮಂಜುನಾಥ್ ಮಾತನಾಡಿ, ಪಟ್ಟಣದ ಎಸ್ಎಸ್ಆರ್ ಮತ್ತು ಉರ್ಡಿಗೆರೆ ಕ್ರಾಸ್ ಕನಕ ವೃತ್ತದಲ್ಲಿ ಫ್ಲೆಕ್ಸ್‌ಗಳನ್ನು ಕಟ್ಟುವುದು ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಎರಡು ಸ್ಥಳಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘ, ಸಂಸ್ಥೆಯವರು ಬ್ಯಾನರ್‌ಗಳನ್ನು ಕಟ್ಟಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರ ಹಾಕುವುದು ಹಾಗೂ ಅವ್ಯಾಚ ಶಬ್ದಗಳಿಂದ ನಿಂಧಿಸುವುದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾವುದು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರು ಹಿತ ದೃಷ್ಟಿಯಿಂದ ಪಟ್ಟಣದ ರಸ್ತೆಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕಲು ಸ್ಥಳ ನಿಗದಿ ಪಡಿಸಿದ್ದು, ಫ್ಲೆಕ್ಸ್ ಹಾಕುವವರು ಪಟ್ಟಣ ಪಂಚಾಯಿತಿಯಿಂದ ಸರ್ಕಾರ ನಿಗದಿ ಪಡಿಸಿದ ಶುಲ್ಕ ನೀಡಿ ಪರವಾನಗಿ ಪಡೆದ ನಂತರ ಹಾಕಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಸದಸ್ಯರಾದ ಸೈಯದ್‌ ಸೈಫುಲ್ಲಾ, ಲಾರಿಸಿದ್ದಪ್ಪ, ಓಬಳರಾಜು, ಕೆ.ವಿ.ಪುರುಷೋತ್ತಮ್, ಕೆ.ಬಿ.ಲೋಕೇಶ್, ಎಸ್.ಪವನ್‌ ಕುಮಾರ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಬಿ.ರಾಮಚಂದ್ರಯ್ಯ, ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್.ನರಸಿಂಹರಾಜು, ಮುಖಂಡರಾದ ಮೈಲಾರಪ್ಪ, ಮಕ್ತಿಯಾರ್, ಆಟೋಕುಮಾರ್, ಕಣಿವೆಹನುಮಂತರಾಯಪ್ಪ, ಗಣೇಶ್, ಅನಸಾರ್‌ ಬಾಷಾ, ಆರೋಗ್ಯಾಧಿಕಾರಿ ರೈಸ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.