ADVERTISEMENT

ಮರುಭೂಮಿ ಆಗುವ ಅಪಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 7:11 IST
Last Updated 1 ಫೆಬ್ರುವರಿ 2018, 7:11 IST

ಚಿಕ್ಕನಾಯಕನಹಳ್ಳಿ: ‘ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಮಣ್ಣಿನ ಗುಣಮಟ್ಟ ಕ್ಷೀಣಿಸಿದೆ. ಕೃಷಿ ಮಣ್ಣಿನ ಸಾಧಾರಣ ಪಿಎಚ್ ಗುಣಮಟ್ಟ 13 ಇರಬೇಕು. ಆದರೆ ತಾಲ್ಲೂಕಿನ ಮಣ್ಣಿನ ಪಿಎಚ್ 6ರಿಂದ 8.5 ಇದೆ.ನೀರಿನಲ್ಲಿ 1.4ರಿಂದ 1,6 ಫ್ಲೋರಾಯ್ಡ್ ಪ್ರಮಾಣ ಇದೆ’ ಎಂದು ಕೃಷಿ ವಿಜ್ಞಾನಿ ಡಾ.ಎಚ್.ಮಂಜುನಾಥ್ ಹೇಳಿದರು.

ಸುಸ್ಥಿರ ಕೃಷಿ ಮತ್ತು ನೀರಿನ ಸ್ವಾವಲಂಬನೆ ವಿಚಾರ ಗೋಷ್ಠಿಯಲ್ಲಿ ಸಹಜ ಕೃಷಿ ಲಾಭದಾಯಕ ಕೃಷಿ ವಿಚಾರವಾಗಿ ಮಾತನಾಡಿ, ‘ಕೃಷಿ ಭೂಮಿಗೆ ಬೇಕಾಗಿರುವುದು ಶೇ 50 ಭಾಗ ನೀರು, ಶೇ 50 ಭಾಗ ಗಾಳಿ ಹಾಗೂ ಕೋಟ್ಯಾನುಕೋಟಿ ಸೋಕ್ಷ್ಮಾಣು ಜೀವಿಗಳಿಗೆ ಬೇಕು’ ಎಂದರು.

‘ಮಣ್ಣಿನ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಹೊರಗಿನಿಂದ ಹಾಕುವ ಯಾವುದೇ ಗೊಬ್ಬರ ಅಥವಾ ಮಣ್ಣು  ಉಪಯೋಗಕ್ಕೆ ಬರುವುದಿಲ್ಲ. ಅತಿ ಹೆಚ್ಚು ಉಳುಮೆಯಿಂದ ನೀರಿನ ಅಂಶವನ್ನು ಭೂಮಿ  ಕಳೆದುಕೊಳ್ಳುತ್ತಿದೆ. ಅತಿಯಾದ ರಾಸಾಯನಿಕ ಬಳಕೆಯಿಂದ ತುಮಕೂರು ಹಾಗೂ ಚಿತ್ರದುರ್ಗದ ಹಿರಿಯೂರು ಭಾಗ 2030ಕ್ಕೆ ಮರುಭೂಮಿಯಾಗಿ ಪರಿಣಮಿಸಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ತೆಂಗು ಬೆಳೆಗಾರರ ಸಂಘಟನೆ ಅಣೆಕಟ್ಟೆ ವಿಶ್ವನಾಥ್ ಮಾತನಾಡಿ, ‘ಯುವಕರು ಕೃಷಿ ಸಮಸ್ಯೆಯನ್ನು ಹಗುರವಾಗಿ ತೆಗೆದುಕೊಳ್ಳುವ ಮನೋಭಾವನೆ ಅಪಾಯಕಾರಿ’ ಎಂದರು.

‘ತಾಲ್ಲೂಕಿನಲ್ಲಿ ತೆಂಗು ಹಾಗೂ ಸಿರಿಧಾನ್ಯಗಳ ಉತ್ಪಾಧನೆ ಹೆಚ್ಚು ಇರುವುದರಿಂದ ನೀರಾ ಹಾಗೂ ಸಿರಿಧಾನ್ಯ ಸಂಸ್ಕರಣೆಗೆ ಯುವಕರು ತೊಡಗಿಸಿಕೊಳ್ಳಬೇಕು’ ಎಂದು ಎಚ್ಚರಿಸಿದರು.

ಅನುಪಮಾ ನಾಗರಾಜ್, ಎಲ್.ಜಯಮ್ಮ, ಸಿಡಿಪಿಒ ತಿಪ್ಪಯ್ಯ ಉಪಸ್ಥಿತರಿದ್ದರು. ಕೆ.ಒ.ರಾಜಣ್ಣ ಸ್ವಾಗತಿಸಿ, ಟಿ.ಪಿ.ಆನಂದಕೃಷ್ಣ ವಂದಿಸಿದರು. ಟಿ.ಎಚ್.ಕಾಂತರಾಜು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.