ADVERTISEMENT

ರೈಲು ಮಾರ್ಗಕ್ಕೆ ₹ 466 ಕೋಟಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 7:18 IST
Last Updated 7 ಫೆಬ್ರುವರಿ 2018, 7:18 IST
ರೈಲು
ರೈಲು   

ತುಮಕೂರು: ಬೆಂಗಳೂರು ಸುತ್ತಮುತ್ತಲ ಉಪ ನಗರಗಳನ್ನು ಸಂಪರ್ಕಿಸುವ ಸಬ್‌ ಅರ್ಬನ್‌ (ಇದರಲ್ಲಿ ತುಮಕೂರು–ಬೆಂಗಳೂರು ಮಾರ್ಗ ಸಹ ಸೇರಿದೆ) ರೈಲ್ವೆ ಯೋಜನೆ ಹೊರತುಪಡಿಸಿ ಜಿಲ್ಲೆಯ ನಾಲ್ಕು ಯೋಜನೆಗಳಿಗೆ ಒಟ್ಟು ₹466 ಕೋಟಿ ಈ ಸಲದ ಕೇಂದ್ರ ಬಜೆಟ್‌ನಲ್ಲಿ ಸಿಕ್ಕಿದೆ. ಇದರಲ್ಲಿ ಮಹತ್ವಕಾಂಕ್ಷೆಯ ಬಾಣವರ–ಹುಬ್ಬಳ್ಳಿ ವಿದ್ಯುದ್ದೀಕರಣ ಯೋಜನೆಯೂ ಸೇರಿದೆ. ಹಣ ಹಂಚಿಕೆಯ ವಿವರಗಳನ್ನು ರೈಲ್ವೆ ಇಲಾಖೆಯ ಪಿಂಕ್ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ನೆನೆಗುದಿಗೆ ಬಿದ್ದಿರುವ ಪ್ರಮುಖ ಯೋಜನೆಗಳಾದ ತುಮಕೂರು–ದಾವಣಗರೆ, ತುಮಕೂರು–ರಾಯದುರ್ಗ  ಮಾರ್ಗಕ್ಕೆ ಹೆಚ್ಚು ಹಣ ನೀಡಲಾಗಿದೆ. ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣವನ್ನು ನೀಡಿದರೆ ಯೋಜನೆಗಳು ತ್ವರಿತಗತಿಯಲ್ಲಿ ಮುಗಿಯಬಹುದೆಂಬ ಆಶಾಭಾವನೆ ಮೂಡಿದೆ.

ತುಮಕೂರು–ದಾವಣಗೆರೆ ಮಾರ್ಗಕ್ಕೆ (199.7 ಕಿಲೋ ಮೀಟರ್‌) ಬೇಕಾಗುವ ಭೂಮಿಯನ್ನು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಸಂಪೂರ್ಣವಾಗಿ ಉಚಿತವಾಗಿ ನೀಡಬೇಕಾಗಿದೆ. ಭೂಸ್ವಾಧೀನಕ್ಕಾಗಿಯೇ ₹ 600 ಕೋಟಿ (ಇಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕು) ಬೇಕಾಗಲಿದೆ. ಇದಲ್ಲದೇ ಮಾರ್ಗ ನಿರ್ಮಾಣಕ್ಕಾಗಿ ಸುಮಾರು ₹1200 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮಾರ್ಗ ನಿರ್ಮಾಣದ ವೆಚ್ಚದಲ್ಲಿ ಶೇ 50ರಷ್ಟನ್ನು ರಾಜ್ಯ ಸರ್ಕಾರ ನೀಡಬೇಕಾಗಿದೆ.

ADVERTISEMENT

‘ಈ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ನಡೆದಿದೆ. ಈವರೆಗೂ ಒಂದೇ ಒಂದು ಎಕರೆಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಮುತುವರ್ಜಿ ತೋರಬೇಕಾಗಿದೆ’ ಎಂದು ರೈಲ್ವೆ ಯೋಜನೆಗಳ ಹೋರಾಟಗಾರ ರಘೋತ್ತಮರಾವ್‌ ತಿಳಿಸಿದರು.

‘ಗಣಿ ಪ್ರದೇಶಗಳ ಪುನಶ್ಚೇತನಾ ಯೋಜನೆಯಡಿ ಜಿಲ್ಲೆಗೆ ಸಿಕ್ಕಿರುವ ಹಣವನ್ನು ಈ ಯೋಜನೆಗೆ ಬಳಸಲು ರಾಜ್ಯ ಸರ್ಕಾರ ಮುಂದಾಗಿದೆ.  ಈ ಬಗ್ಗೆ ಬೇಗ ನಿರ್ಧಾರ ಕೈಗೊಳ್ಳಬೇಕಾಗಿದೆ. ರಾಜ್ಯ ಬಜೆಟ್‌ನಲ್ಲಿ ಹೆಚ್ಚು ಹಣವನ್ನು ನೀಡುವ ಮೂಲಕ ಯೋಜನೆ ಸಾಕಾರಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ತುಮಕೂರು–ರಾಯದುರ್ಗ (213 ಕಿಲೋ ಮೀಟರ್‌) ಯೋಜನೆಗೆ ಈವರೆಗೆ 5ನೇ ಕಿಲೋ ಮೀಟರ್‌ನಿಂದ (ನಗರದ ಪೂರ್‌ ಹೌಸ್‌ ಕಾಲೊನಿ) 23 ಕಿಲೋ ಮೀಟರ್‌ವರೆಗೆ (ಕೊರಟಗೆರೆ ಗಡಿ ಭಾಗದವರೆಗೆ) ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕೊರಟಗೆರೆ–ಪಾವಗಡದವರೆಗೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಯೋಜನೆಗೂ ರಾಜ್ಯ ಸರ್ಕಾರ ಯೋಜನಾ ವೆಚ್ಚದ ಶೇ 50ರಷ್ಟನ್ನು ಭರಿಸಲು ಒಪ್ಪಿಕೊಂಡಿದೆ.

ಪಾವಗಡದಿಂದ ಅತ್ತ ಕಡೆ ಆಂಧ್ರಕಡೆಯ ಭಾಗದ (ಪಾವಗಡ–ರಾಯದುರ್ಗ)  ಕಾಮಗಾರಿ ಈಗಾಗಲೇ ಪೂರ್ಣಗೊಳಿಸಲಾಗಿದೆ. ರಾಜ್ಯದ ಭಾಗದ ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.