ADVERTISEMENT

ನಿರ್ವಹಣೆ ಕಾಲಾವಧಿಗೆ ಮುನ್ನವೇ ಹದಗೆಟ್ಟ ರಸ್ತೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 7:01 IST
Last Updated 19 ಫೆಬ್ರುವರಿ 2018, 7:01 IST

ವೈ.ಎನ್.ಹೊಸಕೋಟೆ : ಗಡಿ ಗ್ರಾಮವಾದ ಮಾರಮ್ಮನಹಳ್ಳಿಯ ಮುಖ್ಯ ರಸ್ತೆ ನಿರ್ಮಾಣಕ್ಕೆ ಹಾಕಿದ ಡಾಂಬರು ನಿರ್ವಹಣಾ ಕಾಲಾವಧಿ ಮುಗಿಯುವ ಮುನ್ನವೇ ಕಿತ್ತು ಹೋಗಿದೆ. ಇದು ವಾಹನ ಸವಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇತಿಹಾಸ ಪ್ರಸಿದ್ದ ಅನ್ನಲಪುರಿ ಆಂಜನೇಯಸ್ವಾಮಿ ದೇವಾಲಯದಿಂದ ಮಾರಮ್ಮನಹಳ್ಳಿ ಗ್ರಾಮದವರೆಗೆ 2014 ರಲ್ಲಿ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ 3.33 ಕಿ.ಮೀ ಡಾಂಬರು ರಸ್ತೆ ನಿರ್ಮಿಸಲಾಗಿದೆ.

ಕಾಮಗಾರಿಯ ಗುತ್ತಿಗೆದಾರರಿಗೆ ನಿಗದಿಪಡಿಸಿದ ನಿರ್ವಹಣಾ ಅವಧಿ 5 ವರ್ಷಗಳಾಗಿದ್ದು, 2019 ರ ವರೆಗೆ ರಸ್ತೆ ನಿರ್ವಹಣೆ ಮಾಡಬೇಕು. ಆದರೆ, ಸುಮಾರು ಒಂದೂವರೆ ವರ್ಷದ ಹಿಂದೆಯೇ ಈ ರಸ್ತೆಯಲ್ಲಿನ ಡಾಂಬರು ಕಿತ್ತು ಹೋಗಿದೆ.

ADVERTISEMENT

ರಸ್ತೆ ತುಂಬಾ ಕುಣಿಗಳು ಬಿದ್ದಿವೆ. ಆದರೆ, ಗುತ್ತಿಗೆದಾರರಾಗಲೀ ಅಥವಾ ಅಧಿಕಾರಿಗಳಾಗಲಿ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ರಸ್ತೆಯಲ್ಲಿ ಎದ್ದಿರುವ ಜಲ್ಲಿಕಲ್ಲುಗಳು ಮತ್ತು ಕುಣಿಗಳಿಂದ ದ್ವಿಚಕ್ರ ವಾಹನ ಸವಾರರು ಹಲವು ಬಾರಿ ಆಯ ತಪ್ಪಿ ಬಿದ್ದಿರುವ ಉದಾಹರಣೆಗಳು ಇವೆ. ಪ್ರತಿನಿತ್ಯ ಓಡಾಡಲು ತುಂಬಾ ಸಮಸ್ಯೆಯಾಗುತ್ತಿದೆ ಎಂದು ವಾಹನ ಸವಾರ ರಾಮಚಂದ್ರ ಅವರು ’ಪ್ರಜಾವಾಣಿ’ಗೆ ಸಮಸ್ಯೆ ವಿವರಿಸಿದರು.

ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಗುರು ತಿಪೇರುದ್ರಸ್ವಾಮಿ ದೇವಸ್ಥಾನವಿದೆ. ವಿವಿಧ ಗ್ರಾಮಗಳಿಂದ ಭಕ್ತರು ದೇವಾಲಯಕ್ಕೆ ಪ್ರತಿದಿನ ಬಂದು ಹೋಗುತ್ತಿರುತ್ತಾರೆ. ಇದೇ ತಿಂಗಳಲ್ಲಿ ಇಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಭಕ್ತರು ಬರುವ ಸಾಧ್ಯತೆ ಇದೆ. ಆದರೆ, ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ ಎಂದು ವಿವರಿಸಿದರು.

ಆಂದ್ರಪ್ರದೇಶದ ಹಳ್ಳಿಗಳಿಂದ ಹೋಬಳಿ ಕೇಂದ್ರಕ್ಕೆ ಬರುವ ಎಲ್ಲರಿಗೂ ಇದೇ ಮುಖ್ಯ ರಸ್ತೆಯಾಗಿದೆ. ಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಈಗಲೇ ಮತಗಳಿಗಾಗಿ ಗ್ರಾಮಕ್ಕೆ ಇದೇ ರಸ್ತೆಯಲ್ಲಿ ಬಂದು ಹೋಗುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳಿಗೆ ಈ ರಸ್ತೆಯ ಸ್ಥಿತಿ ಕಂಡು ಬಂದಂತಿಲ್ಲ. ಸ್ಥಳೀಯ ಮುಖಂಡರು ಇದನ್ನು ಕಂಡು ಕಾಣದಂತೆ ಇದ್ದಾರೆ. ಈಗಲಾದರೂ ರಸ್ತೆ ದುರಸ್ತಿ ಮಾಡಿಸಬೇಕು ಎಂದು ದೇವಾಲಯದ ಭಕ್ತಾಧಿಗಳು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.