ADVERTISEMENT

ಶಿರಾ ನಗರಸಭೆ ಚುನಾವಣೆ69 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:35 IST
Last Updated 15 ಡಿಸೆಂಬರ್ 2021, 4:35 IST

ಶಿರಾ: ನಗರಸಭೆ ಚುನಾವಣೆಗೆ ಮಂಗಳ ವಾರ 69 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಸೋಮವಾರ ದಾಖಲೆಯ 144 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಲ್ಲಿಯವರೆಗೆ ಒಟ್ಟು 248 ನಾಮಪತ್ರ ಸಲ್ಲಿಕೆಯಾಗಿವೆ. ಬುಧವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಹೆಚ್ಚಿನ ಉಮೇದುವಾರಿಕೆ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಬಿಜೆಪಿ ಈಗಾಗಲೇ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದ 15 ವಾರ್ಡ್‌ಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಬೇಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಇದುವರೆಗೂ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

ADVERTISEMENT

ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆ ನಡೆಸಿ ನಿಮ್ಮಲ್ಲಿಯೇ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ. ನೀವು ಆಯ್ಕೆ ಮಾಡಿಕೊಂಡವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಎರಡೂ ಪಕ್ಷದಲ್ಲಿ ಟಿಕೆಟ್‌ಗಾಗಿ ಹಲವು ಮುಖಂಡರು ಪಟ್ಟು ಹಿಡಿರುವುದು ಪಕ್ಷದ ವರಿಷ್ಠರಿಗೆ ತಲೆನೋವು ತಂದಿದೆ.

ಎರಡೂ ಪಕ್ಷದಲ್ಲಿಬಂಡಾಯ ತಪ್ಪಿಸಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಬುಧವಾರ ನೇರವಾಗಿ ಅಭ್ಯರ್ಥಿಗಳಿಗೆ ‘ಬಿ’ ಫಾರಂ ನೀಡಲು ತೀರ್ಮಾನಿಸಲಾಗಿದೆ. ಹಾಗಾಗಿ, ಟಿಕೆಟ್‌ಗಾಗಿ ಆಕಾಂಕ್ಷಿಗಳು ಕೊನೆಯ ಕ್ಷಣದವರೆಗೂ ಕಸರತ್ತು ನಡೆಸುವಂತಾಗಿದೆ.

ಮೂರೂ ಪಕ್ಷಗಳು ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿವೆ. ಹೀಗಾಗಿ, ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿವೆ. ಈಗಾಗಲೇ, ಟಿಕೆಟ್ ದೊರೆಯುವುದು ಅನುಮಾನವಾದ ಹಿನ್ನೆಲೆಯಲ್ಲಿ ಕೆಲವರು ಬೇರೆ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಗೆಲ್ಲುವ ವ್ಯಕ್ತಿಗಳನ್ನು ಸೆಳೆಯುವ ಪ್ರಯತ್ನ ಮೂರು ಪಕ್ಷಗಳಲ್ಲಿ ಗುಟ್ಟಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.