ADVERTISEMENT

ಶೇ 7 ಮೀಸಲಾತಿಗೆ ಆಗ್ರಹ: ವಾಲ್ಮೀಕಿ ಸಮುದಾಯ ಪ್ರತಿಭಟನೆ

ಟೌನ್‌ ಹಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ, ಸಮುದಾಯದ ಹಲವು ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 16:30 IST
Last Updated 6 ಜೂನ್ 2019, 16:30 IST
ತುಮಕೂರಿನಲ್ಲಿ ಗುರುವಾರ ವಾಲ್ಮೀಕಿ ನಾಯಕ ಸಮಾಜದವರು ಪ್ರತಿಭಟನಾ ರ್‍ಯಾಲಿ ನಡೆಸಿದರು
ತುಮಕೂರಿನಲ್ಲಿ ಗುರುವಾರ ವಾಲ್ಮೀಕಿ ನಾಯಕ ಸಮಾಜದವರು ಪ್ರತಿಭಟನಾ ರ್‍ಯಾಲಿ ನಡೆಸಿದರು   

ತುಮಕೂರು: ಕೇಂದ್ರ ಸರ್ಕಾರದ ರೀತಿ ರಾಜ್ಯ ಸರ್ಕಾರವು ಪರಿಶಿಷ್ಟ ವರ್ಗದ ಸಮುದಾಯಕ್ಕೆ ಶೇ 7 ರಷ್ಟು ಮೀಸಲಾತಿ ಕಲ್ಪಿಸಬೇಕು ಹಾಗೂ ಪರಿಶಿಷ್ಟ ವರ್ಗದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ವ್ಯಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಗುರುವಾರ ವಾಲ್ಮೀಕಿ ನಾಯಕ ಸಮಾಜವು ಟೌನ್‌ ಹಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿತು.

ನಾಯಕ ಸಮುದಾಯಕ್ಕೆ ಶೇ 7ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಹತ್ತಾರು ವರ್ಷಗಳಿಂದ ಸರ್ಕಾರಗಳ ಗಮನಕ್ಕೆ ತರಲಾಗಿದೆ. ಎಲ್ಲ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಯಕ ಸಮುದಾಯದ ಹೆಸರಿನಲ್ಲಿ ಹಲವಾರು ಜನರು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಸರ್ಕಾರಿ ನೌಕರಿ ಪಡೆದಿದ್ದಾರೆ. ಪಡೆಯುತ್ತಿದ್ದಾರೆ. ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಹರಿಹರದ ರಾಜನಹಳ್ಳಿ ವಾಲ್ಮೀಕಿ ಮಹಾಸಂಸ್ಥಾನದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಜೂನ್ 9ರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

ADVERTISEMENT

ವಾಲ್ಮೀಕಿ ವಿದ್ಯಾವರ್ಧಕ ಸಂಘದ ಯಜಮಾನ್ ಭೀಮಯ್ಯ, ಕರ್ನಾಟಕ ವಾಲ್ಮೀಕಿ ಸೇನೆಯ ಅಧ್ಯಕ್ಷ ಪ್ರತಾಪ್ ಮದಕರಿ, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಬಿ.ಜಿ.ಕೃಷ್ಣಪ್ಪ, ಸಮಾಜದ ಮುಖಂಡರಾದ ತು.ಬಿ.ಮಲ್ಲೇಶ್, ಹಾಗಲವಾಡಿ ಕೃಷ್ಣಮೂರ್ತಿ, ಕುಪ್ಪೂರು ರಂಗಪ್ಪ ನಾಯಕ, ರಾಮಾಂಜನೇಯ, ಜಿಲ್ಲಾ ಪಂಚಾಯಿತಿ ಸದಸ್ಯ ನಾಗರಾಜು, ರಾಜಣ್ಣ ಬಡ್ಡಿಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.