ADVERTISEMENT

ವಿಳಾಸ ಕೇಳುವ ನೆಪ; ರಾಷ್ಟ್ರೀಯ ಹೆದ್ದಾರಿಯಲ್ಲಿ ₹ 7 ಲಕ್ಷ ದರೋಡೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 12:59 IST
Last Updated 16 ಜುಲೈ 2020, 12:59 IST

ಶಿರಾ: ರಾಷ್ಟ್ರೀಯ ಹೆದ್ದಾರಿ– 234ರಲ್ಲಿ ಬುಧವಾರ ರಾತ್ರಿ ವಿಳಾಸ ಕೇಳುವ ನೆಪದಲ್ಲಿ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿದ ದುಷ್ಕರ್ಮಿಗಳು ₹7.53 ಲಕ್ಷ ದೋಚಿದ್ದಾರೆ.

ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದ ನಟರಾಜು ಕೋಟೆಕ್ ಮಹೇಂದ್ರ ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಮಧುಗಿರಿ, ಶಿರಾ, ಕೊರಟಗೆರೆಗಳಲ್ಲಿ ಬ್ಯಾಂಕ್‌ ನೀಡಿರುವ ಸಾಲವನ್ನು ಗ್ರಾಹಕರಿಂದ ಸಂಗ್ರಹಿಸುವ ಕೆಲಸ ಇವರದ್ದು.

ಬುಧವಾರ ರೈತರಿಗೆ ಬ್ಯಾಂಕ್‌ನಿಂದ ನೀಡಿರುವ ಟ್ರಾಕ್ಟರ್ ಲೋನ್ ಕಂತನ್ನು ಕಟ್ಟಿಸಿಕೊಂಡು ಯರಗುಂಟೆ ಗೇಟ್‌ನಿಂದ ಶಿರಾಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಶಿರಾ ನಗರದ ಹೊರವಲಯದ ಉಲ್ಲಾಸ್ ತೋಪು ಬಳಿ ಬೈಕ್‌ ನಿಲ್ಲಿಸಿಕೊಂಡು ಇಬ್ಬರು ನಿಂತಿದ್ದರು.

ADVERTISEMENT

ಒಬ್ಬ ವ್ಯಕ್ತಿ ಕೈ ತೋರಿಸಿದಾಗ ನಟರಾಜು ದ್ವಿಚಕ್ರವಾಹನ ನಿಲ್ಲಿಸಿದರು. ಒಬ್ಬ ವ್ಯಕ್ತಿ ಸಮೀಪಕ್ಕೆ ಬಂದು ವಿಳಾಸ ಕೇಳಿದನು. ಇದೇ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿ ಖಾರದ ಪುಡಿಯನ್ನು ಮುಖಕ್ಕೆ ಎರಚಿದ್ದಾನೆ. ಅವರಿಂದ ತಪ್ಪಿಸಿಕೊಳ್ಳಲು ನಟರಾಜು ಪ್ರಯತ್ನ ಪಟ್ಟಾಗ, ಚೈನ್‌ನಿಂದ ಹೊಡೆದಿದ್ದಾರೆ.

ಈ ಸಮಯದಲ್ಲಿ ನಟರಾಜು ಹಣವಿದ್ದ ಬ್ಯಾಗನ್ನು ಕೆಳಗೆ ಹಾಕಿದಾಗ ದುಷ್ಕರ್ಮಿಗಳು ಬ್ಯಾಗ್‌ನಲ್ಲಿದ್ದ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ಬರುತ್ತಿದ್ದವರು ನಟರಾಜುಗೆ ನೀರು ನೀಡಿ ಸಹಾಯ ಮಾಡಿದ ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.