ADVERTISEMENT

ತುಮಕೂರು: ಆಸ್ತಿ ನೋಂದಣಿ ಸಂಪೂರ್ಣ ಸ್ಥಗಿತ

ಆನ್‌ಲೈನ್ ಪ್ರಕ್ರಿಯೆಗೆ ತಾಂತ್ರಿಕ ಅಡಚಣೆ: ಪ್ರಾಯೋಗಿಕ ಯೋಜನೆಗೆ ಆರಂಭದಲ್ಲೇ ವಿಘ್ನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 3:46 IST
Last Updated 5 ನವೆಂಬರ್ 2020, 3:46 IST
ಸದಾ ಗಿಜಿಗುಡುತ್ತಿದ್ದ ತುಮಕೂರು ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಜನಸಂದಣಿ ಕಂಡುಬರಲಿಲ್ಲ
ಸದಾ ಗಿಜಿಗುಡುತ್ತಿದ್ದ ತುಮಕೂರು ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಜನಸಂದಣಿ ಕಂಡುಬರಲಿಲ್ಲ   

ತುಮಕೂರು: ತುಮಕೂರು ಸೇರಿದಂತೆ ರಾಜ್ಯದ ಕೆಲವು ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾದ ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಕಾರ್ಯ ತಾಂತ್ರಿಕ ಅಡಚಣೆಯಿಂದ ಸ್ಥಗಿತಗೊಂಡಿದೆ.

ಕಳೆದ ಎರಡು ವರ್ಷಗಳ ಹಿಂದೆಯೇ ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಮಾಡಿಸಲು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಅವಕಾಶ ನೀಡಿತ್ತು. ಆಗಲೂ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದರಿಂದ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಆನ್‌ಲೈನ್‌ ನೋಂದಣಿ ಆರಂಭವಾಗಿದ್ದರೂ, ಶುಲ್ಕ ಪಾವತಿ ವಿಧಾನದಲ್ಲಿ ಕೆಲವು ಅಡಚಣೆಗಳು ಎದುರಾಗಿವೆ.

ಆನ್‌ಲೈನ್ ನೋಂದಣಿಗೆ ಅವಕಾಶ ನೀಡಿದರೂ ಯಾರೊಬ್ಬರೂ ಈ ವ್ಯವಸ್ಥೆಯಲ್ಲಿ ಆಸ್ತಿ ನೋಂದಾಯಿಸಲು ಮುಂದಾಗಲಿಲ್ಲ. ಎಲ್ಲರೂ ಕಚೇರಿಗೆ ಬಂದು ಸಿಬ್ಬಂದಿ ಮೂಲಕವೇ(ಆಫ್‌ಲೈನ್) ನೋಂದಣಿ ಮಾಡಿಸುತ್ತಿದ್ದರು. ಆಫ್‌ಲೈನ್‌ ಆಸ್ತಿ ನೋಂದಣಿಯನ್ನು ಈಗಾಗಲೇ ಸ್ಥಗಿತಗೊಳಿಸಿದ್ದು, ಆನ್‌ಲೈನ್‌ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈಗ ಅಲ್ಲೂ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಪೂರ್ಣ ಪ್ರಮಾಣದಲ್ಲಿ ನೋಂದಣಿ ನಿಲ್ಲಿಸಲಾಗಿದೆ.

ADVERTISEMENT

ಹಿಂದಿನ ವ್ಯವಸ್ಥೆ: ಪತ್ರ ಬರಹಗಾರರ ಮೂಲಕ ಆಸ್ತಿ ನೋಂದಣಿ, ವರ್ಗಾವಣೆ, ಅಡಮಾನ ಪತ್ರ ಸಿದ್ಧಪಡಿಸಿದ ನಂತರ ಉಪನೋಂದಣಾಧಿಕಾರಿ ಕಚೇರಿಗೆ ಬಂದು ನೋಂದಾಯಿಸಿಕೊಳ್ಳುತ್ತಿದ್ದರು. ಶುಲ್ಕವನ್ನು ಡಿ.ಡಿ ಮೂಲಕ ನೀಡಲಾಗುತಿತ್ತು.

ಆನ್‌ಲೈನ್ ವ್ಯವಸ್ಥೆ ಜಾರಿಯಾದ ನಂತರ ಕಚೇರಿಯಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಕೆಲಸವನ್ನೂ ಆಸ್ತಿ ನೋಂದಣಿ ಮಾಡಿಸಿಕೊಳ್ಳುವವರೇ ಮಾಡಬೇಕು. ಶುಲ್ಕವನ್ನು ಡಿ.ಡಿ ಬದಲು ಆನ್‌ಲೈನ್ ಮೂಲಕ ಪಾವತಿಸಬೇಕು. ಸಾಕಷ್ಟು ಜನರಿಗೆ ಈ ಬಗ್ಗೆ ತಿಳಿವಳಿಕೆ ಇಲ್ಲದಿರುವುದು, ಕಂಪ್ಯೂಟರ್ ಜ್ಞಾನದ ಮಾಹಿತಿ ಕೊರತೆ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

‘ಶುಲ್ಕ ಪಾವತಿ ವಿಚಾರದಲ್ಲಿ ಕೆಲವು ಸಮಸ್ಯೆಗಳಾಗಿದ್ದು, ಸರಿಪಡಿಸಲಾಗುತ್ತಿದೆ. ಈವರೆಗೂ ಆನ್‌ಲೈನ್ ಮೂಲಕ ಆಸ್ತಿ ನೋಂದಣಿಗೆ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಎರಡು ದಿನಗಳಿಂದ ಯಾವುದೇ ನೋಂದಣಿ ಮಾಡಿಲ್ಲ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ನೋಂದಣಿ ಮುಂದುವರಿಸಲಾಗುವುದು’ ಎಂದು ಜಿಲ್ಲಾ ನೋಂದಣಾಧಿಕಾರಿ ಸೈಯದ್ ನೂರ್‌ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಭಟನೆ: ಆನ್‌ಲೈನ್ ನೋಂದಣಿ ಆರಂಭವಾದರೆ ನಮ್ಮ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದುಪತ್ರ ಬರಹಗಾರರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.